

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಶುಕ್ರವಾರ ನಗರದ ರುಡ್‌ಸೆಟ್ ಸಂಸ್ಥೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಆಚರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ಕಾನೂನಿನ್ವಯ ಅಪರಾಧವಾಗಿದೆ. ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಲವು ಕಾನೂನುಗಳಿದ್ದು, ಅವುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದರಿಂದ ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಬಹುದಾಗಿದೆ ಎಂದರು.
ಡಿವೈಎಸ್‌ಪಿ ಗಿರೀಶ ತಳಕಟ್ಟಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ, ವಕೀಲ ಬಾಬು ಅವತಾಡೆ, ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡಿದರು. ಮೇಲ್ವಿಚಾರಕಿ ಅಶ್ವಿನಿ ಸನದಿ ಮಾನವ ಕಳ್ಳ ಸಾಗಾಣಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾವಿತ್ರಿ ಗುಗ್ಗರಿ, ದೀಪಾ ಕಾಲೆ, ದೀಪಾಕ್ಷಿ ಜಾನಕಿ, ಎಸ್.ಸಿ. ಮ್ಯಾಗೇರಿ, ಸಾಹೇಬಗೌಡ ಝುಂಜರವಾಡ, ಜಯಶ್ರೀ ಪವಾರ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಮುತ್ತಣ್ಣ ಧನಗರ ಇತರರಿದ್ದರು.