ಮಾನವ ಕಳ್ಳ ಸಾಗಾಣಿಕೆ ತಡೆ ಎಲ್ಲರ ಕರ್ತವ್ಯ

31-kolar-7
ಕೋಲಾರದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಗೆ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್. ಹೊಸಮನಿ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ಡಿವೈಎಸ್‌ಪಿ ವೈ.ಜಿ.ಮುರಳಿಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಮುದ್ದಣ್ಣ ಇತರರು ಇದ್ದರು.
Published on

ಕೋಲಾರ: ಸಾಮಾಜಿಕ ಪಿಡುಗಾಗಿರುವ ಮಾನವ ಕಳ್ಳ ಸಾಗಾಣಿಕೆ ಅಪರಾಧವಾಗಿದೆ. ಇತ್ತೀಚಿಗೆ ಮಕ್ಕಳು ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದು, ಇದರ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್. ಹೊಸಮನಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ಮತ್ತು ಮಹಿಳೆಯರನ್ನು ಜೀತ ಕಾರ್ಮಿಕ ಮತ್ತು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳಲು ಮತ್ತು ಭಿಕ್ಷಾಟನೆ ಮಾಡಿಸುವ ಉದ್ದೇಶದಿಂದ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆ ಬಗ್ಗೆ ತಿಳಿದು ಬಂದರೆ ಮಹಿಳಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಎಂದು ತಿಳಿಸಿದರು. ಪ್ರತಿ ವರ್ಷ ಜುಲೈ ೩೦ ರಂದು ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಚರಿಸಲಾಗುತ್ತಿದ್ದು, ಅದು ೦೧ ದಿನಕ್ಕೆ ಸೀಮಿತವಾಗಿರದೆ ಎಲ್ಲಾ ಅಧಿಕಾರಿಗಳು ಕೈ ಜೋಡಿಸಿ ಅದರ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಾಣಿಕೆ ಸಂಬಂಧಪಟ್ಟಂತೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಮಾತನಾಡಿ, ಸಾಮಾಜಿಕ ಜಾಲತಾಣಗಳಿಂದಾಗಿ ಹೆಚ್ಚಿನ ಅಪರಾಧಗಳು ಆಗುತ್ತಿದ್ದು, ವಿದ್ಯಾರ್ಥಿನಿಯರು ಜಾಗೃತರಾಗಬೇಕಿದೆ. ಮಕ್ಕಳು ಜಾಲತಾಣಗಳ ಪ್ರಭಾವದಿಂದ ಶಿಕ್ಷಣ ವಂಚಿತರಾಗುತ್ತಿದ್ದು, ಈ ನಿಟ್ಟಿನಲ್ಲಿ ಅರಿವು ಮಾಡಿಸಬೇಕು. ಮಾನವ ಕಳ್ಳ ಸಾಗಾಣಿಕೆಯಿಂದಾಗಿ ಮಹಿಳೆಯರು ಮತ್ತು ಮಕ್ಕಳ ಜೀವನ ಹಾಳಾಗುತ್ತಿದೆ. ಮಹಿಳೆ ಮತ್ತು ಮಕ್ಕಳನ್ನು ಮಾಧಕ ವಸ್ತುಗಳ ಸಾಗಾಣಿಕೆ ಮತ್ತು ಕಳ್ಳ ಸಾಗಾಣಿಕೆಯಲ್ಲೂ ಸಹ ಉಪಯೋಗಿಸಿಕೊಳ್ಳುತ್ತಿದ್ದು, ಅದನ್ನು ತಡೆಗಟ್ಟುವುದು ಅವಶ್ಯ ಎಂದು ತಿಳಿಸಿದರು.
ಮಾನವ ಕಳ್ಳ ಸಾಗಾಣಿಕೆ ಅಂಗವಾಗಿ ಹಾಸ್ಟೆಲ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಶಸ್ತಿ ಫಲಕಗಳನ್ನು ನೀಡಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾಗೆ ನ್ಯಾಯಾಧೀಶರಾದ ಸುನಿಲ ಎಸ್. ಹೊಸಮನಿ ಚಾಲನೆ ನೀಡಿದರು. ಜಾಥಾವು ಕೋರ್ಟ್ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೆ ನಡೆದಿದ್ದು, ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರು, ಮತ್ತಿತರರು ಭಾಗವಹಿಸಿದ್ದರು.
ಡಿವೈಎಸ್‌ಪಿ ವೈ.ಜಿ.ಮುರಳಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಂ.ಮುದ್ದಣ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಎನ್. ಬೈರಾರೆಡ್ಡಿ, ವಕೀಲ ಕೆ.ಆರ್. ಧನರಾಜ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ. ಶ್ರೀನಿವಾಸ, ಸಹಾಯಕ ನಿರ್ದೇಶಕ ಚನ್ನಬಸಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ವಿನೋದ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net