ಮಾನವ ಕಳ್ಳ ಸಾಗಣೆಯತ್ತ ಎಚ್ಚರವಿರಲಿ

ctd ----00005
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಮಾನವ ಕಳ್ಳ ಸಾಗಣೆ ಹಾಗೂ ಬಾಲ ಕಾರ್ಮಿಕ ಪ್ರಕರಣಗಳು ಸಂಖ್ಯೆ ಕಡಿಮೆಯಿದ್ದರೂ ಅಧಿಕಾರಿಗಳು ಮೈ ಮರೆಯಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ ವಾಸುದೇವ್ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಜಿಪಂದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಹ ರೋಗದಿಂದ ಗುಣಮುಖವಾದರೂ ಸಹ, ಮತ್ತೊಮ್ಮೆ ಮರುಕಳಿಸದಂತೆ ಕಾಳಜಿ ತೋರುವ ಮಾದರಿಯಲ್ಲಿ ಸಮಾಜಕ್ಕೆ ರೋಗ ಎನಿಸಿರುವ ಮಾನವ ಕಳ್ಳ ಸಾಗಣೆ ಬಗ್ಗೆಯೂ ಎಚ್ಚರ ವಹಿಸಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ 12 ಇಲಾಖೆ ಹಾಗೂ 2 ಸರ್ಕಾರೇತರ ಸಂಸ್ಥೆಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ ಎಂದರು.
ಅನಾದಿ ಕಾಲದಿಂದಲೂ ಮಹಿಳೆ, ಮಕ್ಕಳನ್ನು ವಸ್ತುಗಳ ಹಾಗೆ ಪರಿಗಣಿಸಿ ಮಾನವ ಹಕ್ಕುಗಳ ಹರಣ ಮಾಡಲಾಗುತ್ತಿದೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜೀತ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ಜೀವಂತವಾಗಿವೆ. ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ಈ ಪಿಡುಗುಗಳನ್ನು ತೊಡೆದು ಹಾಕಲು ಸಾಧ್ಯವಾಗದಿರುವುದು ಬೇಸರದ ಸಂಗತಿ ಎಂದರು.
ಈ ನಿಟ್ಟಿನಲ್ಲಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಕಾರ್ಯಪಡೆಗಳು ಜಾಗೃತಿ ವಹಿಸಬೇಕು. ವಿಶ್ವ ಸಂಸ್ಥೆ ಸಹ ಮಾನವ ಕಳ್ಳ ಸಾಗಣೆಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದೆ. ಮಕ್ಕಳ ಭಿಕ್ಷಾಟನೆ, ಲೈಂಗಿಕ ಶೋಷಣೆ, ವೇಶ್ಯಾವಾಟಿಕೆ, ಅಂಗಾಂಗ ದೋಚುವಿಕೆ, ಜೀತಪದ್ಧತಿ ಮಾನವ ಹಕ್ಕುಗಳ ಹರಣಕ್ಕೆ ಕಾರಣವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಮಾತನಾಡಿ, ಜಿಲ್ಲೆಯಲ್ಲಿ ದಾಖಲಾಗುವ ಮಹಿಳೆ ಮತ್ತು ಮಕ್ಕಳ ಕಾಣೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಮಾನವ ಕಳ್ಳ ಸಾಗಣೆ ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಾನವ ಕಳ್ಳ ಸಾಗಣೆ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಇದನ್ನು ತಡೆಗಟ್ಟಲು ಸರ್ಕಾರದ ಜತೆ ಸಮಾಜದ ಸಹಭಾಗಿತ್ಯದ ಅಗತ್ಯವಿದೆ ಎಂದರು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ ಮಾತನಾಡಿ, ಮಾದಕ ವಸ್ತು, ಮಾರಕಾಸ್ತ್ರಗಳ ಸಾಗಣೆ, ನಂತರದ ಸ್ಥಾನದಲ್ಲಿ ಮಾನವ ಕಳ್ಳ ಸಾಗಣೆ ಅಪರಾಧಗಳು ನಿಲ್ಲುತ್ತಿವೆ. ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು ಮಾನವ ಕಳ್ಳ ಸಾಗಣೆ ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ್ ಮಾತನಾಡಿ, ಮಾನವ ಕಳ್ಳ ಸಾಗಣೆ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಂಡು ಬಂದರೆ ಸಹಾಯವಾಣಿ - 112 ಹಾಗೂ 1098 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್. ಬಣಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಾವಣಗೆರೆ ಆಜಾದ್ ನಗರ ಸಿಪಿಐ ಬಾಲಚಂದ್ರ ನಾಯಕ್ ಉಪನ್ಯಾಸ ನೀಡಿದರು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್‌ಕುಮಾರ್ ನಿರೂಪಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಕೆ.ತಿಮ್ಮಪ್ಪ, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಪಿಯು ಡಿಡಿ ಆರ್. ಉಪನಿರ್ದೇಶಕ ಪುಟ್ಟಸ್ವಾಮಿ, ಕಾರ್ಮಿಕ ನಿರೀಕ್ಷಕ ರಾಜಣ್ಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net