ಮಾನವ ಕಳ್ಳ ಸಾಗಣೆ ದೇಶದ ದೊಡ್ಡ ಪಿಡುಗು

ಕಾನೂನು ಅರಿವು
ಆಲೂರು ಮುರಾರ್ಜಿ ವಸತಿ ಶಾಲೆಯಲ್ಲಿ ಮಾನವ ಕಳ್ಳ ಸಾಗಣೆ ತಡೆಯುವ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎಂ.ಸಿ.ನಿರ್ಮಲಾ, ಜಯಶ್ರೀ, ಕೆ.ಎನ್. ಮಹೇಂದ್ರ, ಆರ್. ಬಿ. ಸುರೇಶ್, ಪ್ರಕಾಶ್ ಉಪಸ್ಥಿತರಿದ್ದರು.
Published on

ಆಲೂರು: ಮಾನವ ಕಳ್ಳ ಸಾಗಣೆ ಒಂದು ವ್ಯವಸ್ಥಿತ ಅಪರಾಧವಾಗಿದ್ದು, ಜಾಗತಿಕ ಮಟ್ಟದಲ್ಲಿ ಮಾದಕ ದ್ರವ್ಯ, ಕಳ್ಳ ಸಾಗಣೆ ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಣೆ ಬಳಿಕ ಮಾನವ ಕಳ್ಳ ಸಾಗಣೆ 3ನೇ ಅತಿ ದೊಡ್ಡ ಕಾನೂನುಬಾಹಿರ ಚಟುವಟಿಕೆಯಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜೆ.ಎಂ.ಎಫ್. ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಸಿ.ನಿರ್ಮಲಾ ತಿಳಿಸಿದರು.

ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಮುರಾರ್ಜಿ ವಸತಿ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಮಾನವ ಕಳ್ಳ ಸಾಗಣೆ ತಡೆ ಕುರಿತ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶವು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದರೂ ದುರ್ಬಲ ಮಹಿಳೆಯರು ಮತ್ತು ಮಕ್ಕಳು ಮಾನವ ಕಳ್ಳ ಸಾಗಣೆಯ ಜಾಲದಲ್ಲಿ ಸಿಲುಕಿ ಅಮಾನವೀಯ, ಕರುಣಾಜನಕ ಪರಿಸ್ಥಿತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದೊಂದು ದೊಡ್ಡ ಪಿಡುಗಾಗಿದೆ. ಇಂತಹ ಹೀನಕೃತ್ಯದಿಂದ ರಕ್ಷಿಸಿಕೊಳ್ಳಲು ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಘಟಕ, ಸಂತ್ರಸ್ತರ ಪುನರ್ವಸತಿಗೆ ಹಲವು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದೆ. ಈ ಸೌಲಭ್ಯ ಅನುಷ್ಠಾನಗೊಳಿಸುವ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಅರ್ಹರಿಗೆ ಸೌಲಭ್ಯ ತಲುಪಿಸಿ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಜಯಶ್ರೀ ಮಾತನಾಡಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎ. ಟಿ. ಮಲ್ಲೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಮಹೇಂದ್ರ, ಪ್ರಾಂಶುಪಾಲ ಬಿ.ಎಚ್. ಪ್ರಕಾಶ್, ವಕೀಲ ಆರ್.ಬಿ. ಸುರೇಶ್, ಶಿಕ್ಷಕರಾದ ಎಸ್.ಲೋಕೇಶ, ಆಶ್ರಿತಾ, ಗಾನಶ್ರೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net