ಮಾನದಂಡದನ್ವಯ ರಾಗಿ ಖರೀದಿಸಿ

04 03
Published on

ಜಿಲ್ಲಾಧಿಕಾರಿ ಶುಭಕಲ್ಯಾಣ್​ ನಿರ್ದೇಶನ, ರೈತರಿಗೆ ನೆರಳಿನ ವ್ಯವಸ್ಥೆ ಮಾಡಲು ಸೂಚನೆ

ತುಮಕೂರು: ಜಿಲ್ಲೆಯ 11 ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಸೋಮವಾರದಿಂದ ಆರಂಭವಾಗಿದ್ದು, ತುಮಕೂರು ಎಪಿಎಂಸಿ ಆವರಣದ ಖರೀದಿಗೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ಪ್ರಾರಂಭಿಸಿರುವ ನೋಂದಣಿ ಕೇಂದ್ರದಲ್ಲಿ ನೋಂದಣಿ ಹಾಗೂ ಮಾರಾಟಕ್ಕಾಗಿ ಬಿಸಿಲಿನಲ್ಲಿಯೇ ಸಾಲುಗಟ್ಟಿ ನಿಂತಿದ್ದ ರೈತರಿಗೆ ಕೂಡಲೇ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸ್ಥಳದಲ್ಲಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕ ರಾಜಣ್ಣ ಹಾಗೂ ಖರೀದಿ ಅಧಿಕಾರಿ ರುದ್ರಪ್ಪ ಅವರಿಗೆ ಸೂಚಿಸಿದರು.

ರಾಗಿ ಖರೀದಿಗಾಗಿ ತೆರೆದಿರುವ ಖರೀದಿ ಕೇಂದ್ರದಲ್ಲಿ ನೋಂದಣಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿರುವುದರಿಂದ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಬೇಕು. ರೈತರನ್ನು ಕಾಯಿಸದೆ ನೋಂದಣಿ ಕಾರ್ಯ ಚುರುಕುಗೊಳಿಸಬೇಕು. ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಅನ್ವಯ ರಾಗಿ ಖರೀದಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಸರ್ಕಾರ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್​ ರಾಗಿ ಖರೀದಿ ದರವನ್ನು 4290 ರೂಪಾಯಿಗಳಿಗೆ ನಿಗದಿಪಡಿಸಿದೆ. ರೈತರಿಂದ ನೇರವಾಗಿ ರಾಗಿ ಖರೀದಿಸಲು ಈಗಾಗಲೇ ಜಿಲ್ಲೆಯಲ್ಲಿ 10 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿಗಾಗಿ ಈವರೆಗೂ 51000 ರೈತರು 761000ಕ್ವಿಂಟಾಲ್​ ರಾಗಿಯನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ರಾಗಿಯಲ್ಲಿರುವ ತೇವಾಂಶ ಪ್ರಮಾಣ ಪರಿಶೀಲಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್​ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net