

ಮೈಸೂರು: ಕವಲುದಾರಿಯಲ್ಲಿ ಸಾಗುತ್ತಿರುವ ರಾಜ್ಯದಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ ಎಂದು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ಹೇಳಿದರು.
ವಿಸ್ಮಯ ಪ್ರಕಾಶನದ ವತಿಯಿಂದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಕರ್ತ ಸುದೇಶ್ ದೊಡ್ಡಪಾಳ್ಯ ಅವರ ಮೂರು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ರಾಜ್ಯದ ಸ್ಥಿತಿ ಚಿಂತಾಜನಕವಾಗಿದೆ. ರಾಜ್ಯ ಕುಸಿದು ಹೋಗುವ ಮುನ್ನವೇ ರಕ್ಷಿಸಬೇಕಾಗಿದೆ. ಈ ಸಂದರ್ಭದಲ್ಲಿ ಪತ್ರಕರ್ತರ, ಮಾಧ್ಯಮ ಜವಾಬ್ದಾರಿ ಮುಖ್ಯವಾಗಿದೆ. ಇದನ್ನು ಅರಿತು ಕೆಲಸ ಮಾಡಬೇಕಿದೆ ಎಂದರು.
ಚುನಾವಣೆಯಲ್ಲಿ ಪತ್ರಕರ್ತರ ಪಾತ್ರ ಏನು? ಪೋಸ್ಟ್ ಮ್ಯಾನ್ ಅಥವಾ ಸ್ಟೇನೊಗ್ರಾಫರ್ ರೀತಿ ಹೇಳಿಕೆಗಳನ್ನು ದಾಖಲಿಸುವುದೇ? ಪತ್ರಿಕಾ ಧರ್ಮ ಕಾಪಾಡಬೇಕಿದೆ. ಸತ್ಯ ಮತ್ತು ಪ್ರಾಮಾಣಿಕತೆ ಪರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು
ರಾಜಕಾರಣಿಗಳು ಹೇಳಿಕೆಯನ್ನು ಸತ್ಯಾನ್ವೇಷಣೆ (ಫ್ಯಾಕ್ಟ್ ಚೆಕ್) ಮಾಡಬೇಕು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ರಾಷ್ಟ್ರ ಅಧ್ಯಕ್ಷರ ಭಾಷಣದ ಸತ್ಯ ಮತ್ತು ಸುಳ್ಳನ್ನು ಮುಖಪುಟದಲ್ಲಿ ಪ್ರಕಟಿಸುತ್ತದೆ. ಇದು ಮಾದರಿಯಾಗಬೇಕು. ಹೀಗೆ ಮಾಡದಿದ್ದರೆ ಪತ್ರಕರ್ತ ಅನಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಲಿಯುಗ, ಅಮೃತಕಾಲದಂತಹ ಪದಗಳನ್ನು ಬಳಸುತ್ತ ಮೂರ್ಖರ ಸಂತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ರಾಜಪಥ ಕರ್ತವ್ಯ ಪಥವಾಗಿ, ಮೊಘಲ್ ಗಾರ್ಡನ್ ಅಮೃತ ಉದ್ಯಾನ, ಹೈದಾರಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಬದಲಿಸಲಾಗಿದೆ. ಹೆಸರು ಬದಲಾದರೆ ಸ್ಥಿತಿ ಬದಲಾಗುವುದೇ? ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ? ಎಂದು ಪ್ರಶ್ನಿಸಿದರು.
ಕನ್ನಡದ ಪತ್ರಕರ್ತರು 2-3 ಪುಸ್ತಕಗಳನ್ನು ಬರೆದ ತಕ್ಷಣ ಬರಹಗಾರ ಎನಿಸಿಕೊಳ್ಳುವ ಆಸೆಯಿದೆ. ಆದರೆ, ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಗ್ಯಾಬ್ರಿಯಲ್ ಮಾರ್ಕ್ವೆಜ್ ತಾನು ಹುಟ್ಟು ಪತ್ರಕರ್ತ, ನನ್ನ ರಕ್ತದಲ್ಲಿ ವರದಿಗಾರನ ಗುಣ ಇದೆ. ಅದಕ್ಕೆ ಹೆಮ್ಮೆ ಎಂದು ಹೇಳಿರುವುದನ್ನು ತಿಳಿಸಿದರು.
ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಕನ್ನಡದಲ್ಲಿ ಪತ್ರಕರ್ತರ ಅಂಕಣ ಬರಹಗಳ ಪುಸ್ತಕ ಹೇರಳವಾಗಿ ಪ್ರಕಟವಾಗುತ್ತಿವೆ. ಸೃಜನಶೀಲ ಕೃತಿಗಳನ್ನು ಹೆಚ್ಚು ಬರೆಯಬೇಕು. ವರ್ತಮಾನದ ಸಾಮಾಜಿಕ, ರಾಜಕೀಯ ಬಗ್ಗೆ ಬಹಳ ಬರೆಯಬೇಕು. ಉದಾಹರಣೆಗೆ 17 ಶಾಸಕರು ಏಕೆ ಪಕ್ಷಾಂತರವಾದರು ಎಂಬುದು ಉತ್ತಮ ವಸ್ತುವಾಗಿದೆ ಎಂದರು.
ಸುದೇಶ್ ದೊಡ್ಡ ಪಾಳ್ಯ ಅವರ ‘ಈಶಾನ್ಯ ದಿಕ್ಕಿನಿಂದ’ ಅಂಕಣ ಬರಹ, ‘ಹಂಗರಹಳ್ಳಿಯ ಬರ್ಬರ ಸಂಕೋಲೆಗಳು’ ವಿಭಿನ್ನ ಬರಹಗಳ ಕಟ್ಟು ಮತ್ತು ‘ಒಲವು ನಮ್ಮ ಬದುಕು’ ಪ್ರೇಮ ಕಥನಗಳ ಸರಣಿಯ 3ನೇ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು.
ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞರಾದ ಕೃಪಾಕರ-ಸೇನಾನಿ ಮಾತನಾಡಿದರು. ಲೇಖಕ, ಪತ್ರಕರ್ತ ಸುದೇಶ್ ದೊಡ್ಡಪಾಳ್ಯ, ವಿಸ್ಮಯ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ಇದ್ದರು.