ಮಾಧ್ಯಮ ಪ್ರಜಾಪ್ರಭುತ್ವದ ರಕ್ಷಾ ಕವಚ

bkt-31-1
:ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಾಗಲಕೋಟೆಯ ಪಿ.ಜಯರಾವ್, ಜಮಖಂಡಿಯ ಎಂ.ಸಿ.ಗೊಂದಿ, ಬಸವರಾಜ ಬಹೀರಶೆಟ್ಟಿ, ಇಳಕಲ್ಲದ ಬಿ. ಬಾಬು ಅವರಿಗೆ ಜಿಲ್ಲಾ ಕಾನಿಪ ಸಂಘದಿಂದ ಸನ್ಮಾನಿಸಲಾಯಿತು
Published on

ಬಾಗಲಕೋಟೆ: ಪ್ರಜಾಪ್ರಭುತ್ವ ಶಕ್ತಿಯುತ ಆಯುಧ ಮಾಧ್ಯಮ. ಮಹಾತ್ಮ ಗಾಂಜಿ, ಡಾ.ಬಿ.ಆರ್.ಅಂಬೇಡ್ಕರ ಅವರ ಆದರ್ಶದಲ್ಲಿ ಮುನ್ನಡೆಯಬೇಕು. ಸುದ್ದಿಯಲ್ಲಿ ಸತ್ಯ ಅಡಗಿರಬೇಕು. ವೈಯಕ್ತಿಕ ತೇಜೋವಧೆಯಿಂದ ಸಮಾಜಕ್ಕೆ ಯಾವ ಸಂದೇಶ ನೀಡಲು ಸಾಧ್ಯವಿಲ್ಲ. ಮಾಧ್ಯಮ ಪ್ರಜಾಪ್ರಭುತ್ವ ರಕ್ಷಾ ಕವಚವಾಗಿದೆ ಎಂದು ಜಲ ಸಂಪನ್ಮೂಲ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿನ ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕ ಮತ್ತು ಬಾಗಲಕೋಟೆ ಜಿಲ್ಲಾ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರ ಸೈನಿಕರಿಗೆ ಇರುವ ಶಕ್ತಿ ಒಬ್ಬ ಪತ್ರಕರ್ತನಿಗೆ ಇರುತ್ತದೆ. ಸಾವಿರ ಸೈನ್ಯದ ಯುದ್ಧವನ್ನು ಎದುರಿಸುವ ಸಾಮರ್ಥ ಪತ್ರಕರ್ತನ ಲೇಖನಿಗಿದೆ. ಪತ್ರಿಕೆ, ಟಿವಿ ಮಾಧ್ಯಮಗಳು ಜನತೆಗೆ ಮಾಹಿತಿ ನೀಡುವ ಪ್ರಬಲ ಅಸ್ತ್ರಗಳಾಗಿವೆ. ಅವು ಆರೋಗ್ಯಪೂರ್ಣ ಸಮಾಜ ಹಾಗೂ ಸಮೃದ್ಧ ದೇಶ ನಿರ್ಮಾಣಕ್ಕೆ ಬಳಕೆಯಾಗಬೇಕು. ಸ್ವಾತಂತ್ರ್ಯ ಚಳವಳಿಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದಿದೆ. ಮಹಾತ್ಮಾಗಾಂಜಿ, ಡಾ.ಅಂಬೇಡ್ಕರ,ಫ.ಗು.ಹಳಕಟ್ಟಿ ಪತ್ರಕರ್ತರಾಗಿ ಮಾಡಿದ ಕೆಲಸಗಳು ನಮಗೆ ಪಾಠವಾಗಬೇಕು ಎಂದರು
ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಸುದ್ದಿ ಮನೆಯ ಆದರ್ಶಗಳನ್ನು ಇಂದಿನ ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಮಾಧ್ಯಮದ ಜವಾಬ್ದಾರಿಯಿದೆ. ಸಮಕಾಲೀನ ವಿಚಾರಧಾರೆಗಳನ್ನು ಪ್ರತಿಪಾದಿಸುವ ಜೊತೆಗೆ ಸಮಾಜದ ಸ್ವಾಸ್ತ್ಯ ಕಾಪಾಡುವ ಸುದ್ದಿಗಳು ಹೊರಬರಬೇಕು, ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪತ್ರಕರ್ತರು ಪತ್ರಿಕೆಗಳ ಮೂಲಕ ಸಮಸ್ಯೆಗಳನ್ನು ಎತ್ತಿ ತೋರಿಸಿದಾಗ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವೈಯಕ್ತಿಕ ಟೀಕೆ ಪತ್ರಿಕೋದ್ಯಮದಲ್ಲಿ ಬೇಡ. ಅಭಿವೃದ್ಧಿಪರ ಚಿಂತನೆಗಳು ಪತ್ರಿಕೋದ್ಯಮದಲ್ಲಿ ಮೂಡಿಬರಬೇಕು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಪತ್ರಕರ್ತನೊಳಗೆ ಒಬ್ಬ ನ್ಯಾಯಾಧಿಶ ಇರಬೇಕು. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು, ಬ್ಲಾಕ್ ಮೇಲ್ ತಂತ್ರಗಳು ಹಾಗೂ ದಂಧೆಗಳನ್ನು ಮಾಡುವ ಪತ್ರಕರ್ತರನ್ನು ಸುದ್ದಿ ಮನೆಯಿಂದ ದೂರ ಇಟ್ಟು ಸುದ್ದಿ ಮನೆಯನ್ನು ಸ್ವಚ್ಚವಾಗಿಸಬೇಕು. ಸಮಾಜ, ದೇಶ ಕಟ್ಟುವ ಕೆಲಸ ಪತ್ರಕರ್ತರದ್ದು ಹೊರತು ಸಮಾಜ ಒಡೆಯುವ, ಮನಸ್ಸು ಕೆಡಿಸುವ ಕೆಲಸ ನಮ್ಮದಲ್ಲ. ನಮ್ಮ ವೃತ್ತಿಯಲ್ಲಿ ಅಂತಃಕರಣವಿರಬೇಕು. ತಳಮಟ್ಟದ, ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.

ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ್ ಅಧ್ಯಕ್ಷತೆ ವಹಿಸಿದ್ದರು. ವಿ.ಪ ಸದಸ್ಯ ಪಿ.ಎಚ್.ಪೂಜಾರ, ಸಿಇಒ ಟಿ.ಭೂಬಾಲನ್, ರಾಜ್ಯ ಕಾನಿಪ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾನಿಪ ಕಾರ್ಯಕಾರಿ ಸಮಿತಿಯ ಸದಸ್ಯ ಮಹೇಶ ಅಂಗಡಿ, ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು. ಜಯತೀರ್ಥ ತಾಸಗಾಂವ ಪ್ರಾರ್ಥಿಸಿದರು. ಜಿಲ್ಲಾ ಕಾನಿಪ ಪ್ರಧಾನ ಕಾರ್ಯದರ್ಶಿ ಶಂಕರ ಎಸ್. ಕಲ್ಯಾಣಿ ಸ್ವಾಗತಿಸಿದರು. ಪ್ರಕಾಶ ಬಾಳಕ್ಕನವರ ನಿರೂಪಿಸಿದರು. ಕಾನಿಪ ಜಿಲ್ಲಾ ಖಜಾಂಚಿ ಜಗದೀಶ ಗಾಣಿಗೇರ ವಂದಿಸಿದರು.

ಸನ್ಮಾನ:ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಬಾಗಲಕೋಟೆಯ ಪಿ.ಜಯರಾವ್, ಜಮಖಂಡಿಯ ಎಂ.ಸಿ.ಗೊಂದಿ, ಬಸವರಾಜ ಬಹೀರಶೆಟ್ಟಿ, ಇಳಕಲ್ಲದ ಬಿ. ಬಾಬು ಅವರಿಗೆ ಜಿಲ್ಲಾ ಕಾನಿಪ ಸಂಘದಿಂದ ಸನ್ಮಾನಿಸಲಾಯಿತು. ಅಲ್ಲದೆ ಪತ್ರಿಕಾ ವಿತರಕರಾದ ಬಾಗಲಕೋಟೆಯ ಮಲ್ಲಯ್ಯ ಸರಗಣಾಚಾರಿ, ಗುಳೇದಗುಡ್ಡದ ಉಮಾ ಪಾಟೀಲಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net