

ಶನಿವಾರಸಂತೆ: ಮಾದ್ರೆ ಗ್ರಾಮದಲ್ಲಿ ನೆಲಸಿರುವ ಸುಗ್ಗಿಯಮ್ಮ, ಕೆಂಚಮ್ಮ, ದೇವಿರಮ್ಮನವರ ಸುಗ್ಗಿಹಬ್ಬ ಮಂಗಳವಾರ ಬೆಳಗ್ಗೆ ಸಂಪನ್ನಗೊಂಡಿತು.
ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸುಗ್ಗಿಯಮ್ಮ, ಕೆಂಚಮ್ಮ ಮತ್ತು ದೇವಿರಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಪ್ರತಿವರ್ಷವೂ ಗ್ರಾಮದ ಸುಗ್ಗಿಕಟ್ಟೆಯಲ್ಲಿ 2 ದಿನ ಸುಗ್ಗಿಹಬ್ಬ ಆಚರಿಸಲಾಗುತ್ತದೆ. ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದ್ರೆ ಗ್ರಾಮದ ಸುಗ್ಗಿ ಉತ್ಸವ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲೂ ಪ್ರಸಿದ್ಧಿ ಪಡೆದಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿನ ಭಕ್ತರು ಆಗಮಿಸಿದ್ದರು.
ಸೋಮವಾರ ಬೆಳಗ್ಗೆ 9.30ರಿಂದ ಸಂಜೆ 4 ವರೆಗೆ ಸುಗ್ಗಿ ಉತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಅಡೆ ಕಟ್ಟುವ ಕಾರ್ಯ, ಅಡೆ ದೇವರಿಗೆ ಗಂಗಾಸ್ನಾನ ಪೂಜೆ, ಅಡ್ಡಪಲ್ಲಕ್ಕಿ ಮರೆವಣಿಗೆ ಮೂಲಕ ಗ್ರಾಮದ ಸುಗ್ಗಿಕಟ್ಟೆಗೆ ಪ್ರವೇಶದೊಂದಿಗೆ ಸುಗ್ಗಿ ಉತ್ಸವಕ್ಕೆ ಚಾಲನೆ ದೊರೆಯಿತು.
ಸೋಮವಾರ ರಾತ್ರಿ 10 ಗಂಟೆಗೆ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಅಡೆ ದೇವರುಗಳಾದ ಸುಗ್ಗಿಯಮ್ಮ, ಕೆಂಚಮ್ಮ, ದೇವಿರಮ್ಮನವರ ಸುಗ್ಗಿ ಉತ್ಸವವನ್ನು ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಮುಂಜಾನೆ 4 ಗಂಟೆಯಿಂದ ಸುಗ್ಗಿಕಟ್ಟೆಯಲ್ಲಿ ಕುದುರೆ ಕುಣಿತ, ಕೀಲು ಕುದುರೆ, ಬಿಲ್ಲು ಕುಣಿತ, ಮಾಲು ಕುಣಿತ ಪ್ರದರ್ಶನ ಗಮನ ಸೆಳೆಯಿತು. ಬೆಳಗ್ಗೆ 7 ಗಂಟೆಗೆ ಸುಗ್ಗಿ ಉತ್ಸವದ ಅಡೆ ದೇವರುಗಳಿಗೆ ಮಹಾಮಂಗಳಾರತಿ, ಪೂಜೆ ನೆರವೇರಿತು. ಬಳಿಕ ಕೆಂಡೋತ್ಸವ ಜರುಗಿತು. ಬೆಳಗ್ಗೆ 10 ಗಂಟೆಗೆ ಸುಗ್ಗಿಕಟ್ಟೆಯಿಂದ ಅಡೆ ದೇವರುಗಳನ್ನು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತಂದು ದೇವಸ್ಥಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಸುಗ್ಗಿ ಉತ್ಸವ ಸಂಪನ್ನಗೊಂಡಿತು.
ಸುಗ್ಗಿ ಉತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳು ಸೇರಿದಂತೆ ಪಕ್ಕದ ಜಿಲ್ಲೆಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.