ಹನೂರು: ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಮುದಾಯ ಸಂಘಟನೆ ಸಂಬಂಧ ಶನಿವಾರ ಪಟ್ಟಣದ ಡಾ.ಬಾಬು ಜಗಜೀವನರಾಮ್ ಸಮುದಾಯದ ಭವನದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾದಿಗ ಸಮುದಾಯದ ಮುಖಂಡರು ಸಭೆ ನಡೆಸಿದರು.
ಈ ವೇಳೆ ಮುಖಂಡ ಪಾಳ್ಯ ರಾಚಪ್ಪ ಮಾತನಾಡಿ, ಎಲ್ಲ ರಂಗದಲ್ಲೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಇದರಿಂದ ಸಮುದಾಯವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಸಂಘಟಿತರಾಗಿ ಅವಕಾಶಗಳನ್ನು ಪಡೆದುಕೊಳ್ಳಬೇಕಿದೆ. ಇದೀಗ ಜಿಲ್ಲಾ ಹಾಗೂ ತಾಪಂ ಚುನಾವಣೆ ಸಮೀಪಿಸುತ್ತಿದ್ದು, ಸಮುದಾಯಕ್ಕೆ ಮೀಸಲು ಪ್ರಾತಿನಿದ್ಯವನ್ನು ಸಿಗಬೇಕಿದೆ. ಈ ದೆಸೆಯಲ್ಲಿ ತಾಲೂಕು ಮಟ್ಟದಲ್ಲಿ ಸಮುದಾಯದ ಮುಖಂಡರ ಸಭೆ ನಡೆಸಿ ನಾಯಕತ್ವದಲ್ಲಿ ಸಮಿತಿ ರಚಿಸುವ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹಕಾರ ನೀಡುವುದರ ಮೂಲಕ ಸಮುದಾಯದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ರಾಜಕೀಯ ಪ್ರಾತಿನಿದ್ಯವನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್, ಗ್ರಾಪಂ ಸದಸ್ಯ ಮುತ್ತುರಾಜು, ಮುಖಂಡರಾದ ಬೂದುಬಾಳು ಮಹದೇವ, ಹನೂರಿನ ಗುರುಸ್ವಾಮಿ, ಕರಿಯನಪುರದ ರಾಚಪ್ಪ, ಪಿ.ಜಿ. ಪಾಳ್ಯದ ಪಾಪಣ್ಣ, ಭೈರನತ್ತದ ಬಸವಣ್ಣ, ವಡಕೆಹಳ್ಳದ ವೀರ, ರಾಮಾಪುರದ ರವಿ, ಕಾಂಚಳ್ಳಿಯ ತಿಮ್ಮಣ್ಣ ಹಾಗೂ ಇನ್ನಿತರರು ಇದ್ದರು.