

ಕಲಬುರಗಿ: ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಮಾದಿಗ ಸಮಾಜದವರಿಗೆ ಭಾರತೀಯ ಜನತಾ ಪಕ್ಷದ ಟಿಕೆಟ್ ನೀಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಚಲಗೇರಾ ಆಗ್ರಹಿಸಿದರು. ಮಾದಿಗ ಸಮುದಾಯದ ಗುರುಗಳಾದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಗೋವಿಂದ ಕಾರಜೋಳ ಸೇರಿ ಮಾದಿಗ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಬೇಕು. ಚಿತ್ರದುರ್ಗ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಮತದಾರರಿದ್ದು, ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ಎರಡು ಮೀಸಲು ಕ್ಷೇತ್ರಗಳಲ್ಲಿ ಈಗಾಗಲೇ ಟಿಕೆಟ್ ಘೋಷಣೆ ಮಾಡಿದ್ದು, ಬಾಕಿ ಉಳಿದಿರುವ ಚಿತ್ರದುರ್ಗದಲ್ಲಿ ಮಾದಿಗ ಸಮಾಜದವರಿಗೆ ಟಿಕೆಟ್ ನೀಡಬೇಕು. ಮಾದಿಗ ಸಮುದಾಯದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಮತ್ತೊಮ್ಮೆ ಸ್ಪರ್ಧಿಸಲು ಆಸಕ್ತಿ ವಹಿಸಿಲ್ಲ. ಅವರ ಸ್ಥಾನಕ್ಕೆ ಮಾದಿಗ ಸಮುದಾಯದವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡರಾದ ಗುಂಡಪ್ಪ ಸಿರಡೋಣ, ಶಿವಶರಣಪ್ಪ ಸಾಗರ, ಬಸವರಾಜ ಇದ್ದರು.