ಮಾದಿಗ ಮಹಾಸಭಾದಿಂದ ತಮಟೆ ಚಳವಳಿ

Mahasabha
Published on

ಚಿತ್ರದುರ್ಗ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದರೂ ಒಳ ಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸಿ ಮಾದಿಗ ಮಹಾಸಭಾದ ಕಾರ್ಯಕರ್ತರು ಶುಕ್ರವಾರ ತಮಟೆ ಚಳವಳಿ ನಡೆಸಿದರು.

ನಗರದಲ್ಲಿ ಮೆರವಣಿಗೆ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು. ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.

ಮಹಾಸಭಾ ಅಧ್ಯಕ್ಷ ಹನುಮಂತಪ್ಪ ದುರ್ಗಾ ಮಾತನಾಡಿ, ತೆಲಂಗಾಣ, ಹರಿಯಾಣ, ಪಂಜಾಬ್, ಆಂಧ್ರ ಪ್ರದೇಶದಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಕರ್ನಾಟಕದಲ್ಲಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ಸಮುದಾಯದ ಹಲವರು ಈಗಲೂ ಮುಖ್ಯವಾಹಿನಿಗೆ ಬಂದಿಲ್ಲ. ಎಸ್ಸಿಯಲ್ಲಿನ 101 ಜಾತಿಗಳಿಗೂ ಸಾಮಾಜಿಕ ನ್ಯಾಯ ಸಿಗಬೇಕಾದರೆ, ಒಳ ಮೀಸಲಾತಿ ಜಾರಿಯಾಗಲೇಬೇಕು. ಅದಕ್ಕಾಗಿ ಸಮುದಾಯ ಒಗ್ಗಟ್ಟಿನಿಂದ ಹೋರಾಡಬೇಕೆಂದು ಮನವಿ ಮಾಡಿದರು.

ಕರುನಾಡ ವಿಜಯಸೇನೆ ಅಧ್ಯಕ್ಷ ಕೆ.ಟಿ. ಶಿವಕುಮಾರ್ ಮಾತನಾಡಿ, ಮೂರು ದಶಕಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರಗಳು ವಂಚಿಸುತ್ತಲೇ ಬರುತ್ತಿವೆ ಎಂದು ಕಿಡಿಕಾರಿದರು.

ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಬಿ. ರಾಜಣ್ಣ, ಏಕಾಂತಪ್ಪ, ಕುಂಚಿಗನಹಾಳ್ ಮಹಲಿಂಗಪ್ಪ, ಟಿ. ವೆಂಕಟೇಶ್, ದೇವರಾಜ್, ಸುನಿಲ್ಯಾದವ್, ಕೆ. ರಾಜು, ರಾಮಚಂದ್ರಪ್ಪ ದೊಡ್ಡಘಟ್ಟ, ವಿಶ್ವನಾರಾಯಣಮೂರ್ತಿ, ಕೆಂಚಪ್ಪ, ಚಂದ್ರಶೇಖರ್, ಸುನಿತಾ, ಲಕ್ಕಮ್ಮ, ಗೌರಮ್ಮ, ಯಶೋದಮ್ಮ, ಮಂಜಮ್ಮ, ಚಂದ್ರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net