ಮಾದರಿ ನಾಯಕ ರಾಜೇಂದ್ರಗೆ ಜನ ಮನ್ನಣೆ ನೀಡಲಿಲ್ಲ

nrp jds
ಎನ್.ಆರ್.ಪುರದಲ್ಲಿ ತಾಲೂಕು ಜೆಡಿಎಸ್‌ನಿಂದ ಎಚ್.ಟಿ.ರಾಜೇಂದ್ರಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಮಾತನಾಡಿದರು. ಚಂದ್ರಶೇಖರ್, ಬಿ.ಕೆ.ಜಾನಕೀರಾಂ, ಕಣಿವೆ ವಿನಯ್, ಎಂ.ಒ.ಜೋಯಿ, ಕೆ.ಎನ್.ಶಿವದಾಸ್ ಇತರರಿದ್ದರು.
Published on

ಎನ್.ಆರ್.ಪುರ: ರಾಜ್ಯ ಜೆಡಿಎಸ್ ಮಾಜಿ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ ಅವರ ನಿಧನದಿಂದ ಕ್ಷೇತ್ರದ ಜನರಿಗೆ ಹಾಗೂ ಜೆಡಿಎಸ್‌ಗೆ ಅಪಾರ ನಷ್ಟವಾಗಿದೆ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.

ತಾಲೂಕು ಜೆಡಿಎಸ್‌ನಿಂದ ಎಚ್.ಟಿ.ರಾಜೇಂದ್ರ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಶರಣರ ಸೇವೆಯನ್ನು ಮರಣದಲ್ಲಿ ನೋಡು ಎಂಬಂತೆ ಎಚ್.ಟಿ.ರಾಜೇಂದ್ರ ಅವರ ಅಂತಿಮಯಾತ್ರೆ ನಡೆಯಿತು ಎಂದರು. ಜೆಡಿಎಸ್ ಕ್ಷೇತ್ರದಲ್ಲಿ ನೆಲೆಕಳೆದು ಕೊಂಡ ಸಂದರ್ಭದಲ್ಲಿ 2004ರಲ್ಲಿ ಎಚ್.ಟಿ.ರಾಜೇಂದ್ರ ಜೆಡಿಎಸ್‌ನಿಂದ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಭದ್ರ ನೆಲೆ ಕಲ್ಪಿಸಿದರು. ಕ್ಷೇತ್ರದ ಅಭಿವೃದ್ಧಿಯ ದೂರದೃಷ್ಟಿತ್ವ ಹೊಂದಿದ್ದ ರಾಜಕಾರಣಿಯನ್ನು ಜನರು ಕೈಬಿಟ್ಟರು. ಅವರ ಯೋಚನೆ, ಚಿಂತನೆಗಳಿಂದ 2008ರಲ್ಲಾದರೂ ಅವರು ಶಾಸಕರಾಗಬೇಕಿತ್ತು. ಆದರೆ ನ್ಯಾಯಯುತವಾಗಿ ಬದುಕಿದವರನ್ನು ಜನರು ಕೈಹಿಡಿಯಲಿಲ್ಲ. ರಾಜೇಂದ್ರ ಅವರು ಶಾಸಕರಾಗಿದ್ದರೆ ಕ್ಷೇತ್ರ ಪ್ರಗತಿ ಕಾಣುತ್ತಿತ್ತು. ಜನಪರ ಕಾಳಜಿ ಇರುವವರು ಶಾಸಕರಾಗಿ ಆಯ್ಕೆಯಾಗಿದ್ದರೆ ಅಭಿವೃದ್ಧಿಯ ಪರ್ವ ಆರಂಭವಾಗುತ್ತಿತ್ತು. ಇದು ನನಸಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಜಾತ ಶತ್ರುವಾಗಿದ್ದ ರಾಜೇಂದ್ರ ಅವರಿಗೆ ಪಕ್ಷದಲ್ಲಿ ಗೌರವವಿತ್ತು. ಅವರಲಿದ್ದ ಪಕ್ಷ ನಿಷ್ಠೆ, ಪ್ರಾಮಾಣಿಕತೆಯನ್ನು ನಾವು ಮೈಗೂಡಿಸಿಕೊಂಡರೆ ಅದೇ ಅವರಿಗೆ ಕೊಡುವ ಗೌರವ. ಜೆಡಿಎಸ್ ಇರುವವರೆಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸಲಾಗುವುದು ಎಂದರು.

ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜೇಂದ್ರ ಕೇವಲ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು. ಶಿಕ್ಷಣ ತಜ್ಞ, ಪ್ರಗತಿಪರ ಕೃಷಿಕ, ಅಧ್ಯಯನಶೀಲ ವ್ಯಕ್ತಿಯಾಗಿದ್ದರು. ರಾಜ್ಯಮಟ್ಟದ ನಾಯಕರಲ್ಲಿರಬೇಕಾದ ಅರ್ಹತೆ ಅವರಲ್ಲಿತ್ತು. ಅಜಾತ ಶತ್ರು, ಸಮಾಜವಾದಿ ಚಿಂತಕ, ಜಾತ್ಯತೀತ ಮನೋಭಾವನೆ, ಜ್ಞಾನದ ಭಂಡಾರ ಅವರಲ್ಲಿತ್ತು ಎಂದು ಹೇಳಿದರು.

ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿದರು. ಅಧಿಕಾರದ ಆಸೆಗಾಗಿ ಪಕ್ಷಾಂತರವಾಗದೆ ಜನತಾ ಪರಿವಾರದಲ್ಲಿಯೇ ಅವರ ಜೀವನ ಅಂತ್ಯಗೊಂಡಿತು. ಶಾಸಕರಾಗ ಬೇಕೆಂಬ ಕನಸು ಈಡೇರಲಿಲ್ಲ. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸೇರಿದ್ದ ಜನಸ್ತೋಮವೇ ಅವರ ವ್ಯಕ್ತಿತ್ವಕ್ಕೆ ಸಾಕ್ಷಿ. ಅವರ ಆದರ್ಶ ಪ್ರತಿಯೊಬ್ಬರೂ ಅನುಸರಿಸುವಂತದ್ದು ಎಂದರು.

ಜೆಡಿಎಸ್ ಹಿರಿಯ ಮುಖಂಡ ಬಿ.ಕೆ.ಜಾನಕೀರಾಂ ಮಾತನಾಡಿ, ರಾಜೇಂದ್ರ ಅವರು ಸರ್ವಜನಾಂಗದ ಗೌರವಕ್ಕೆ ಪಾತ್ರವಾಗಿದ್ದರು. ನುಡಿದಂತೆ ನಡೆಯುವ ವ್ಯಕ್ತಿತ್ವ, ಅಪಾರ ಜ್ಞಾನ ಭಂಡಾರ ಅವರಲ್ಲಿತ್ತು. ಇಂಥ ಆದರ್ಶ ವ್ಯಕ್ತಿಯನ್ನು ಜೆಡಿಎಸ್ ವರಿಷ್ಠರು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಿಲ್ಲ ಎಂಬ ನೋವು, ಬೇಸರ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿದೆ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಕಣಿವೆ ವಿನಯ್, ಎಸ್.ಎಸ್.ಶಾಂತಕುಮಾರ್, ಎನ್.ಎಂ.ಮರುಳಪ್ಪ ಮಾತನಾಡಿದರು. ಮುಖಂಡರಾದ ಕೆ.ಎನ್.ಶಿವದಾಸ್, ಬಿ.ಟಿ.ರವಿ, ಎಂ.ಒ.ಜೋಯಿ, ದೀಪಕ್, ನಾಗೇಶ್, ಗೋವಿಂದ, ಪಿಕಪ್‌ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net