ಮಾದರಿ ಗ್ರಾಮ ಸಂಕಲ್ಪ ಮಾಡಿ

aurad sanman1
Published on

ಔರಾದ್: ಜನರು ಅಪಾರ ವಿಶ್ವಾಸವಿಟ್ಟು ನಿಮಗೆ ಮತ ಹಾಕಿ ಗೆಲ್ಲಿಸಿದ್ದಾರೆ. ಅದಕ್ಕೆ ಕುತ್ತು ಬರದಂತೆ ನೋಡಿಕೊಳ್ಳುವ ಜಿಮ್ಮೇದಾರಿ ನಿಮ್ಮೆಲ್ಲರ ಮೇಲಿದೆ. ಎಲ್ಲರೂ ಸೇರಿ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡಬೇಕು. ತಮ್ಮ ತಮ್ಮ ಗ್ರಾಮ ಮಾದರಿ ಮಾಡುವ ಸಂಕಲ್ಪ ತೊಟ್ಟು ಕೆಲಸ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಪ್ರಭು ಚವ್ಹಾಣ್ ನೂತನ ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ಗುರುವಾರ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಔರಾದ್ ಮತ್ತು ಕಮಲನಗರ ತಾಲೂಕಿನ ನೂತನ ಗ್ರಾಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಗೆದ್ದವರೆಲ್ಲರೂ ಪಕ್ಷಭೇದ ಮರೆತು ಊರಿನ ಸಮಗ್ರ ವಿಕಾಸಕ್ಕೆ ಶ್ರಮಿಸಬೇಕು. ಈಗ ಚುನಾವಣೆ ಮುಗಿದಿದೆ. ತಮ್ಮಲ್ಲಿರುವ ಏನೇ ಮನಸ್ತಾಪ ಇದ್ದರೂ ಬದಿಗೊತ್ತಿ ಗ್ರಾಮದ ಹಿತದಿಂದ ದುಡಿಯಬೇಕು ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರದಿಂದ ಅನೇಕ ಜನಪರ ಕೆಲಸ ನಡೆಯುತ್ತಿವೆ. ಹಳ್ಳಿಗಳ ವಿಕಾಸಕ್ಕೆ ಹಲವು ಯೋಜನೆ ರೂಪಿಸಿ ನೇರವಾಗಿ ಗ್ರಾಮೀಣರಿಗೆ ಲಾಭ ಮುಟ್ಟಿಸಲಾಗುತ್ತಿದೆ. ಜನರು ಈ ಕೆಲಸಕಾರ್ಯಗಳನ್ನು ಮೆಚ್ಚಿ ಬಿಜೆಪಿ ಬೆಂಬಲಿತರಿಗೆ ಸಾಥ್ ನೀಡಿದ್ದಾರೆ. ಎರಡೂ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಶೇ.90ರಷ್ಟು ಗೆದ್ದಿರುವುದು ಸಂತಸ ತಂದಿದೆ ಎಂದರು.

ಗ್ರಾಮದ ಅಭಿವೃದ್ಧಿಗಾಗಿ ನೀವು ನಡೆಸುವ ಎಲ್ಲ ಕೆಲಸಗಳಿಗೆ ನನ್ನ ಸಹಕಾರ ಇರಲಿದೆ. ಏನೇ ಕೆಲಸವಿದ್ದರೂ ನೇರವಾಗಿ ನನಗೆ ಭೇಟಿ ಮಾಡಿ ಎಂದು ಕೋರಿದರು. ಈ ವೇಳೆ ವಿವಿಧ ಗ್ರಾಪಂ ಪ್ರಮುಖರು ತಮ್ಮೂರಿನಲ್ಲಿ ಆಗಬೇಕಾದ ಕೆಲಸಕಾರ್ಯಗಳ ಕುರಿತ ಮಾಹಿತಿ ಪಟ್ಟಿಯನ್ನು ಸಚಿವರಿಗೆ ಸಲ್ಲಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಮುಖರಾದ ಡಿ.ಕೆ.ಸಿದ್ರಾಮ, ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ್ ಗಾದಗಿ, ಕಿರಣ್ ಪಾಟೀಲ್ ಹಕ್ಯಾಳ, ರಾಮಶೆಟ್ಟಿ ಪನ್ನಾಳೆ, ಅಶೋಕ ಹೋಕ್ರಾಣೆ, ಡಾ. ಕಲ್ಲಪ್ಪ ಉಪ್ಪೆ, ವಸಂತ ಬಿರಾದಾರ, ಶಿವಾಜಿರಾವ ಕಾಳೆ, ಅಂಬಿಕಾ ಪವಾರ್, ಸಂತೋಷ ಪೋಕಲವಾರ್, ಸಲಾವುದ್ದಿನ್, ಮಾರುತಿ ಚವ್ಹಾಣ್, ಗಿರೀಶ ವಡೆಯರ್, ಈರಾರೆಡ್ಡಿ, ರಮೇಶ ಉಪಾಸೆ, ಸತೀಷ ಪಾಟೀಲ್, ರಮೇಶ ದೇವಕತ್ತೆ, ಅಮೃತರಾವ ವಟಗೆ, ವೆಂಕಟರಾವ ಡೋಂಬಾಳೆ ಇತರರಿದ್ದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮೀಣ ವಿಕಾಸಕ್ಕೆ ನಡೆಯುತ್ತಿರುವ ಕೆಲಸಕಾರ್ಯಗಳಿಗೆ ಮನ್ನಿಸಿ ಬೀದರ್ ಜಿಲ್ಲೆಯಲ್ಲಿ ಈ ಸಲ ಶೇ.80ರಷ್ಟು ಗ್ರಾಪಂ ಸದಸ್ಯರು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಎಲ್ಲರೂ ಪಕ್ಷಭೇದ ಮರೆತು ಗ್ರಾಮ ವಿಕಾಸದಲ್ಲಿ ತೊಡಗಬೇಕು. ಹಳ್ಳಿ ಅಭಿವೃದ್ಧಿಯಿಂದಲೇ ದೇಶದ ಪ್ರಗತಿ ಸಾಧ್ಯ.| ಪ್ರಭು ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ

ಪ್ರಸಕ್ತ ಗ್ರಾಪಂನಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಆಯ್ಕೆಯಾಗಿದ್ದಾರೆ. ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಸಮಗ್ರ ವಿಕಾಸದಲ್ಲಿ ತೊಡಗಬೇಕು. ತಮಗೆ ಸಿಕ್ಕ ಅವಕಾಶದ ಸದ್ಬಳಕೆ ಮಾಡಿಕೊಂಡು ಜನಮನ ಗೆದ್ದು ಮುಂದೆ ಉನ್ನತ ಸ್ಥಾನಕ್ಕೇರಬೇಕು.| ವಿಜಯಕುಮಾರ ಗಾದಗಿಔರಾದ್ ತಾಲೂಕು ಉಸ್ತುವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net