

ಔರಾದ್: ಕ್ಷೇತ್ರವನ್ನು ಮಾದರಿಯಾಗಿಸಲು ಸಂಕಲ್ಪ ತೊಟ್ಟಿದ್ದು, ಅದರಂತೆ ಯೋಜನೆಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಶಾಸಕ ಪ್ರಭು ಚವ್ಹಾಣ್ ಹೇಳಿದರು.
ತಾಲೂಕು ಆಡಳಿತದಿಂದ ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿಗೆ ಕೈಗಾರಿಕೆಗಳನ್ನು ತರಬೇಕೆಂಬುದು ಬಹಳ ದಿನಗಳ ಒತ್ತಾಸೆಯಾಗಿದೆ. ಈ ದಿಶೆಯಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರಿನ ಪೂರೈಕೆಯ ಕೆಲಸಗಳು ನಡೆಯುತ್ತಿವೆ. ಮಾಳೆಗಾಂವನಲ್ಲಿ ಕೇಂದ್ರ ಸರ್ಕಾರದ ಪವರ್ ಗ್ರಿಡ್ ಕಾರ್ಪೋರೇಷನ್‌ನಿಂದ ೧೬೩ ಎಕರೆ ಜಮೀನಿನಲ್ಲಿ ೨೧೪೭ ಕೋಟಿ ರೂ.ವೆಚ್ಚದಲ್ಲಿ ಬೃಹತ್ ಪವರ್ ಟ್ರಾನ್ಸ್ಮಿಷನ್ ಸೆಂಟರ್ ನಿರ್ಮಾಣ ಕೆಲಸ ನಡೆಯುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯ ಜತೆಗೆ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ ಎಂದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಕೊರತೆಯನ್ನು ಶಾಶ್ವತವಾಗಿ ಪರಿಹರಿಸಬೇಕು. ನಮ್ಮ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಕ್ಷೇತ್ರದ ೩೬ ಕೆರೆಗಳನ್ನು ತುಂಬಿಸುವ ೫೬೦ ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ಪಡೆದಿದ್ದೇನೆ. ಸರ್ಕಾರದ ನಿಷ್ಕಾಳಜಿಯಿಂದ ಯೋಜನೆ ಆರಂಭಗೊಳ್ಳುತ್ತಿಲ್ಲ. ಸಂಬಂಧಿಸಿದ ಸಚಿವರ ಮೇಲೆ ಒತ್ತಡ ತಂದು ಕಾಮಗಾರಿ ಆರಂಭಿಸಲಾಗುವುದು. ಜತೆಗೆ ಬಾಕಿಯಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಆರಂಭಿಸಲು ಅಗತ್ಯ ಕ್ರಮ ವಹಿಸುವುದಾಗಿ ಹೇಳಿದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಕ ದತ್ತಾತ್ರಿ ಗಿರಿ ವಿಶೇಷ ಉಪನ್ಯಾಸ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ವೈಜಿನಾಥ ಘೂಳೆ, ಉಪಾಧ್ಯಕ್ಷೆ ರಾಧಾಬಾಯಿ ಕೃಷ್ಣ ನರೋಟೆ, ಅಧಿಕಾರಿಗಳಾದ ಶಿವಕುಮಾರ ಘಾಟೆ, ಸ್ವಾಮಿದಾಸ, ಡಾ.ಗಾಯತ್ರಿ, ಸುಧಾರಾಣಿ, ವೆಂಕಟರಾವ ಶಿಂಧೆ, ಅನೀಲ ಮೇಲ್ದೊಡ್ಡಿ, ಸುಭಾಷ , ಸಂಘ ಸಂಸ್ಥೆಗಳ ಪ್ರಮುಖರು, ಮುಖಂಡರು, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು. ಉಪ ಖಜಾನಾಧಿಕಾರಿ ಮಾಣಿಕರಾವ ನೇಳಗೆ ನಿರೂಪಣೆ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಹನಿಯರ ಭಾವಚಿತ್ರಗಳಿಗೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
====