ಮಾದರಿ ಕೃಷಿಭೂಮಿ ಗುತ್ತಿಗೆ ಕಾಯ್ದೆಗೆ ವಿರೋಧ

27-02-rama-Raitha Protest Bhoomi
Published on

ರಾಮನಗರ: ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ 2016ನ್ನು ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಎಂ.ರಾಮು ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, ದೇಶದಲ್ಲಿ 6.5 ಕೋಟಿ ಮತ್ತು ರಾಜ್ಯದಲ್ಲಿ ಸುಮಾರು 52.5 ಲಕ್ಷ ಎಕರೆ ಬೀಳು ಭೂಮಿ ಇದೆ. ಶೇ.85 ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದಾರೆ. ಭೂಮಿಯ ಹಿಡುವಳಿಯೂ ಆಧುನಿಕ ಕೃಷಿಗೆ ಯೋಗ್ಯವಲ್ಲ, ಇದರಿಂದ ಆರ್ಥಿಕವಾಗಿ ಲಾಭವೂ ಅಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬಂಡವಾಳ ಹೂಡಿ ಆಧುನಿಕವಾಗಿ ಕೃಷಿ ಮಾಡುವ ದೊಡ್ಡ ಕಂಪನಿಗಳಿಗೆ ಭೂಮಿ ಗುತ್ತಿಗೆ ನೀಡಿದರೆ ರೈತರಿಗೆ ಲಾಭದಾಯಕ ಹಾಗೂ ಕೃಷಿ ಉತ್ಪನ್ನವೂ ಹೆಚ್ಚುತ್ತದೆ ಎನ್ನುವ ಕಾರಣ ಮುಂದಿಟ್ಟುಕೊಂಡು ಸರ್ಕಾರ ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ 2016 ಜಾರಿಗೆ ಮುಂದಾಗಿದೆ.

ಈ ಸಂಬಂಧ ದಾವೋಸ್‌ನಲ್ಲಿ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತು ಕೊಟ್ಟು ಬಂದಿದ್ದಾರೆ. ಈ ಯೋಜನೆ ಜಾರಿ ಆಗಲೇಬೇಕು ಎನ್ನುವುದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆ ಇದೆ. ಆದರೆ, ಈ ಯೋಜನೆ ನಮ್ಮ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ರೈತರನ್ನು ಬೀದಿಗೆ ತರುವ ಹುನ್ನಾರವಿದೆ ಎಂದು ರಾಮು ಆರೋಪಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲಯ್ಯ, ಮುಖಂಡರಾದ ಹೊನ್ನಾಯಕನಹಳ್ಳಿ ಕೃಷ್ಣಪ್ಪ, ಪುಟ್ಟಸ್ವಾಮಿ ಮುಂತಾದವರು ಇದ್ದರು.ರೋಗಿಯನ್ನೇ ಕೊಲ್ಲುವ ಕಾರ್ಯ ಕೃಷಿ ಕ್ಷೇತ್ರದಲ್ಲಿರುವ ರೋಗ ಗುರುತಿಸಿರುವ ಸರ್ಕಾರ, ರೋಗಕ್ಕೆ ಮದ್ದು ನೀಡುವ ಬದಲು ರೋಗಿಯನ್ನೇ ಇಲ್ಲವಾಗಿಸುವ ಕೆಲಸಕ್ಕೆ ಕೈ ಹಾಕಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಲ್ಪ ಭೂಮಿಯಲ್ಲಿ ಬದುಕಲು ಸಾಧ್ಯವಿಲ್ಲ.

ಈ ಹಿನ್ನೆಲೆಯಲ್ಲಿ ಇಂತಹ ರೈತರಿಗೆ ಹೆಚ್ಚಿನ ಭೂಮಿ ನೀಡಬೇಕು. ಅಷ್ಟು ಮಾತ್ರವಲ್ಲದೆ ಅಗತ್ಯವಿರುವ ನೀರಾವರಿ, ತಂತ್ರಜ್ಞಾನದ ನೆರವು, ಸಾಲಸೌಲಭ್ಯ, ಬೀಜ, ಮಾರುಕಟ್ಟೆ ರಕ್ಷಣೆ ನೀಡಿದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗಿ ಉತ್ಪಾದನೆಯೂ ಹೆಚ್ಚುತ್ತದೆ. ಇದನ್ನು ಹೊರತುಪಡಿಸಿ ಮಾದರಿ ಕೃಷಿ ಗುತ್ತಿಗೆ ನೀತಿ ಜಾರಿಗೆ ತಂದು ಈ ಮೂಲಕ ಈಗಾಗಲೇ ಕೃಷಿಯಿಂದ ವಿಮುಖರಾಗಿರುವ ರೈತ ಸಮುದಾಯವನ್ನು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಗಳ ಗುಲಾಮರನ್ನಾಗಿ ಮಾಡುವ ಕೆಲಸಕ್ಕೆ ಸರ್ಕಾರ ಹೊರಟಿದೆ. ಕೂಡಲೇ ರಾಜ್ಯ ಸರ್ಕಾರ ಈ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಒಂದು ವೇಳೆ ಜಾರಿ ಮಾಡುವುದೇ ಆದರೆ ರೈತರ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ರಾಮು ಎಚ್ಚರಿಕೆ ನೀಡಿದರು. ಮಾದರಿ ಕೃಷಿ ಭೂಮಿ ಗುತ್ತಿಗೆ ಕಾಯ್ದೆ 2016ರ ಕರಡು ಪ್ರತಿಯನ್ನು ಸುಟ್ಟು ಆಕ್ರೋಶ ವ್ಯಕಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net