ಮಾದರಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸಿದ್ಧತೆ

19 bgp ceo news photo
Published on

ಬಾಗೇಪಲ್ಲಿ : ಮಿಟ್ಟೇಮರಿ ಹೋಬಳಿ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾದರಿ ಆರೋಗ್ಯ ಕೇಂದ್ರವನ್ನಾಗಿ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಕಲ್ಪಿಸುವುದೇ ಜಿಪಂ ಮುಖ್ಯ ಗುರಿ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.

ತಾಲೂಕಿನ ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಇಒ ಪೌಜಿಯಾ ತರನ್ನುಮ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ಮಾತನಾಡಿದರು.

ಬಾಗೇಪಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವುದಾಗಿ ಸಚಿವ ಬಿ.ಶ್ರೀರಾಮಲು ಭರವಸೆ ನೀಡಿದ್ದು, ಆಸ್ಪತ್ರೆಯ ಉನ್ನತಿಕರಣಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಕ್ರೀಯಾ ಯೋಜನೆ ಪಟ್ಟಿ ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ತೋಟಗಾರಿಕೆ, ಲೋಕೋಪಯೋಗಿ, ಜಿಪಂ ತಾಂತ್ರಿಕ ವಿಭಾಗ ಹಾಗೂ ಜಿಲ್ಲಾಡಳಿತದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಪೌಜಿಯಾ ತರನ್ನುಮ್ ಮಾತನಾಡಿ, ಗ್ರಾಮೀಣ ಜನತೆಗೆ ಗುಣಮಟ್ಟದ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ. ಆದ್ದರಿಂದ ಅಗತ್ಯವಿರುವ ಕಾಮಗಾರಿಗಳ ಕ್ರೀಯಾ ಯೋಜನೆ ಪಟ್ಟಿಯನ್ನು ತ್ವರಿತವಾಗಿ ಜಿಪಂಗೆ ನೀಡುವಂತೆ ಸ್ಥಳದಲ್ಲಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಜಿ ಲೋಕೂರ್, ಜಿಪಂ ತಾಂತ್ರಿಕ ಉಪವಿಭಾಗದ ಇಇ ವಿ.ಮೋಹನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ, ಜಿಪಂ ಎಇಇ ಅನಂತ್, ಲೋಕೋಪಯೋಗಿ ಇಲಾಖೆ ಎಇಇ ರಾಮಲಿಂಗಾರೆಡ್ಡಿ, ತಾಪಂ ಇಒ ಸಿ.ಶ್ರೀನಿವಾಸ, ತೋಟಗಾರಿಕೆ ಇಲಾಖೆಯ ಎಒ ಶ್ರೀನಿವಾಸ, ನರೇಗಾ ಎಇಇ ನಾರಾಯಣ, ಗ್ರಾಪಂ ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷೆ ಪದ್ಮಾವತಿ ವೆಂಕಟೇಶಪ್ಪ, ಮುಖಂಡರಾದ ಚೊಕ್ಕಂಪಲ್ಲಿ ಕಾಮರೆಡ್ಡಿ, ಸ್ಟುಡಿಯೋ ಮಂಜು, ಎನ್.ನಾರಾಯಣಪ್ಪ, ಶಿವಪ್ಪ, ಎಂ.ಬಿಎಲ್.ನರಸಿಂಹಯ್ಯ, ಗ್ರಾಪಂ ಪಿಡಿಒ ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net