ಮಾದಮ್ಮಗೆ ಪ್ರಶಸ್ತಿ ತಾಲೂಕಿಗೆ ಗೌರವ

03 HANUR 2
Published on

ಹನೂರು: ತಾಲೂಕಿನ ಜೀರಿಗೆಗದ್ದೆ ಗ್ರಾಮದ ಗಿರಿಜನ ವೃದ್ಧೆ ಮಾದಮ್ಮ ಅವರಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ತಾಲೂಕಿಗೆ ಸಂದ ಗೌರವ ಎಂದು ಶಾಸಕ ಆರ್.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಗುರುವಾರ ತಾಲೂಕು ಅಡಳಿತದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾದಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ 67 ಸಾಧಕರಿಗೆ ಸರ್ಕಾರ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದರಲ್ಲಿ ತಾಲೂಕಿನ ಜೀರಿಗೆಗದ್ದೆ ಗ್ರಾಮದ ಸೋಲಿಗ ವೃದ್ಧೆ ಮಾದಮ್ಮ ಅವರಿಗೆ ಈ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯ. ಇವರು ಗಿರಿಜನರ ಹಾಡಿಗಳಿಗೆ ನಾಟಿ ವೈದ್ಯ ಎನಿಸಿದ್ದು, ರೋಗರುಜಿನಗಳಿಗೆ ಔಷಧ ನೀಡಿ ಗುಣಪಡಿಸಿದರಲ್ಲದೇ ನೂರಾರು ಹೆರಿಗೆಗಳನ್ನು ಮಾಡುವುದರ ಮೂಲಕ ಪ್ರಸೂತಿ ತಜ್ಞೆ ಎನಿಸಿಕೊಂಡಿದ್ದಾರೆ ಎಂದರು.

ಪುನೀತ್ ರಾಜ್‌ಕುಮಾರ್ ಅವರು ಬದುಕಿದ್ದ ವೇಳೆ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಿದ್ದಾರೆ. ಎಲೆಮರೆ ಕಾಯಿಯಂತೆ ಮಹಾ ಮಾನವತಾವಾದಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅಂಗಾಂಗ ದಾನ ಮಾಡುವುದರ ಮೂಲಕ ಯುವಕರಿಗೆ ಸ್ಫೂರ್ತಿದಾಯಕರಾಗಿದ್ದಾರೆ. ಇವರ ಪ್ರೇರಣೆಯಿಂದ 85 ಸಾವಿರ ಜನರು ನೇತ್ರದಾನ ಹಾಗೂ 600 ಜನರು ಅಂಗಾಂಗ ದಾನಕ್ಕೆ ನೋಂದಣಿಯಾಗಿದ್ದಾರೆ. ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ತಾಲೂಕು ಕಾರ್ಯನಿರತ ಪ್ರತ್ರಕರ್ತರ ಸಂಘದ ವತಿಯಿಂದಲೂ ಮಾದಮ್ಮ ಅವರನ್ನು ಗೌರವಿಸಲಾಯಿತು. ಪಪಂ ಉಪಾಧ್ಯಕ್ಷ ಗಿರೀಶ್, ಉಪ ತಹಸೀಲ್ದಾರ್ ಸುರೇಖಾ, ತಾಪಂ ಇಒ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಮೂರ್ತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ, ಶಿರಸ್ತೇದಾರ ನಾಗೇಂದ್ರ, ಸೆಸ್ಕ್ ಜೆಇ ರಂಗಸ್ವಾಮಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಭಾಸ್ಕರ್, ಆರ್‌ಐ ಮಾದೇಶ್, ಗ್ರಾಮ ಲೆಕ್ಕಿಗ ಶೇಷಣ್ಣ, ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net