

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ 3ನೇ ದಿನದವಾದ ಗುರುವಾರ ನರಕ ಚತುರ್ದಶಿ ಹಿನ್ನೆಲೆಯಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಜಾತ್ರೆಯ ಅಂಗವಾಗಿ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ನರಕ ಚತುರ್ದಶಿ ಪ್ರಯುಕ್ತ ದೇಗುಲದಲ್ಲಿ ಬೇಡಗಂಪಣ ಅರ್ಚಕರಿಂದ ಮಾದಪ್ಪನಿಗೆ ವಿವಿಧ ಅಭಿಷೇಕ ಸೇವೆಯ ಜತೆಗೆ ಧೂಪ, ದೀಪದಾರತಿ ಸೇವೆಯನ್ನು ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ ಬೆಳಗಿಸಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಎಂದಿನಂತೆ ಭಕ್ತರು ಸರತಿ ಸಾಲು ಹಾಗೂ ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆದರು.
ಈಗಾಗಲೇ ಜಾತ್ರೆ ಪ್ರಯುಕ್ತ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಇದರ ಜತೆಗೆ ಶುಕ್ರವಾರ ಅಮಾವಾಸ್ಯೆ ಕಾರಣ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ (ದೇಗುಲದ ಸುತ್ತ ಕಸ ತೆಗೆಯುವ ಕಾರ್ಯ) ಕೈಗೊಂಡು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರಲ್ಲದೇ ಕೆಲವು ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾದಿಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ಮಾದಪ್ಪನ ಕೃಪೆಗೆ ಪಾತ್ರರಾದರು.
ಪ್ರಸಾದ ಪರೀಕ್ಷಿಸಿದ ಕಾರ್ಯದರ್ಶಿ
ದೀಪಾವಳಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಿರುವ ಕುರಿತು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಹೆಚ್ಚು ಭಕ್ತರು ಸೇರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜತೆಗೆ ಲಕ್ಷಾಂತರ ಭಕ್ತರು ಪ್ರಸಾದ ಸವಿಯಲು ಕಲ್ಪಿಸಿರುವ ನಿರಂತರ ದಾಸೋಹಕ್ಕೆ ತೆರಳಿ ತಯಾರಿಸಿರುವ ಆಹಾರವನ್ನು ಸವಿದು ಗುಣಮಟ್ಟವನ್ನು ಪರೀಕ್ಷಿಸಿ, ಆಹಾರ ತಯಾರಿಕೆಯಲ್ಲಿ ರುಚಿಯನ್ನು ಕಾಯ್ದುಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿದರು.