

ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಂಗಳವಾರ ನಾಗರ ಅಮಾವಾಸ್ಯೆಯ ಪ್ರಯುಕ್ತ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.
ನಾಗರ ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇಗುಲವನ್ನು ತಳಿರು-ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ಸೋಮವಾರ ಸಂಜೆ 6.30 ರಿಂದ 8.30ರವರೆಗೆ ಸ್ವಾಮಿಗೆ ಸಾಂಪ್ರದಾಯಿಕವಾಗಿ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಲಾಯಿತು.
ಮಂಗಳವಾರ ಬೆಳಗಿನ ಜಾವ 3.30 ಗಂಟೆಯಿಂದ 6.30ರವರೆಗೆ ಸ್ವಾಮಿಗೆ ಪ್ರಥಮ ಹಾಗೂ ದ್ವಿತೀಯ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉಪವಾಸವಿದ್ದ ಬೇಡಗಂಪಣ ಸರದಿ ಅರ್ಚಕರು ಛತ್ರಿ-ಚಾಮರ ವಾದ್ಯಮೇಳದೊಂದಿಗೆ ದೇಗುಲ ಸಮೀಪದ ನಂದನವನದ ಮಜ್ಜನ ಬಾವಿಗೆ ತೆರಳಿ ಆಗ್ರೋದಕ ಹಾಗೂ ಬಾಯಿಗೆ ಬಟ್ಟೆ ಕಟ್ಟಿಕೊಂಡು ಕರೆದ ಹಾಲನ್ನು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದರು.
ನಂತರ, ಸ್ವಾಮಿಗೆ ಸಂಕಲ್ಪಾಧಿ, ಗಣಪತಿ ಪೂಜೆ, ಪಂಚಕಳಸ ಸಮೇತ ನವರತ್ನ ಕಿರೀಟಧಾರಣೆ, ಏಕವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಶತನಾಮ ಬಿಲ್ವಾರ್ಚನೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿ ಹಾಗೂ ಹಾಲಿನ ಅಭಿಷೇಕವನ್ನು ನೆರವೇರಿಸಿದರು.
ಬಳಿಕ 2ನೇ ಅಭಿಷೇಕದ ವಿಶೇಷ ಪೂಜೆಯಲ್ಲಿ ಮಾದಪ್ಪನಿಗೆ ಅಭಿಷೇಕ ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟ ಧಾರಣೆ, ಧೂಪ ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.
ಭಕ್ತರು ದೇವರ ದರ್ಶನ ಪಡೆದರಲ್ಲದೇ ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ಉತ್ಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಮಾದಪ್ಪನ ಕೃಪೆಗೆ ಪಾತ್ರರಾದರು.
ಜೈ ಮಹತ್ ಮಲೆಯಾ, ಉಘೇ ಮಾದಪ್ಪ ಉಘೇ.. ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಭಾವ ಮೆರೆದರು. ಇನ್ನು ಹರಕೆ ಹೊತ್ತ ಭಕ್ತರು ಅಂತರಗಂಗೆಯ ಕಲ್ಯಾಣಿಯಲ್ಲಿ ಪುಣ್ಯಸ್ನಾನ ಮಾಡಿ ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ (ದೇಗುಲದ ಸುತ್ತ ಕಸ ತೆಗೆಯುವ ಕಾರ್ಯ) ನೆರವೇರಿಸಿದರು.
ಅಮಾವಾಸ್ಯೆ ಹಿನ್ನೆಲೆ ಮಂಗಳವಾರ ಮ.ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಬಹುತೇಕ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಊರಿಗೆ ತೆರಳಿದರು. ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿನ್ನದ ತೇರಿನ ಉತ್ಸವವು ವಿಜೃಂಭಣೆಯಿಂದ ನೆರವೇರಿತು.