ಮಾದಪ್ಪನ ಸನ್ನಿಧಿಯಲ್ಲಿ ಸೇವಾ ಮನೋಭಾವ ಅಗತ್ಯ

04 HANUR 3
ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ನೌಕರರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು. ಡಿ.ಎಸ್ ರಮೇಶ್, ಕಾತ್ಯಾಯಿನಿ ದೇವಿ, ಆನಂದಯ್ಯ, ಮಹದೇವಪ್ರಸಾದ್ ಇತರರು ಇದ್ದರು.
Published on

ಮಹದೇಶ್ವರ ಬೆಟ್ಟ/ ಹನೂರು: ಪ್ರಾಧಿಕಾರದ ನೌಕರರು ಮಾದಪ್ಪನ ಸುಕ್ಷೇತ್ರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸುತ್ತಿರುವುದು ಮೆಚ್ಚುವ ಸಂಗತಿ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು.


ಮ.ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ಧ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ 3ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಾದಪ್ಪನ ಸನ್ನಿಧಿಯಲ್ಲಿ ಕಾರ್ಯನಿರ್ವಹಿಸುವವರು ಕಾಯಕದಿಂದ ಅಭಿವೃದ್ಧಿ ಕಾಣಬೇಕು. ಜತೆಗೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಈ ದಿಸೆಯಲ್ಲಿ ಸಂಘದ ಸದಸ್ಯರು ಒಗ್ಗಟ್ಟಿನಿಂದ ಕೂಡಿದ್ದು, ಭಕ್ತರ ಸೇವೆ ಮಾಡಿದರೆ ಭಗವಂತನಿಗೆ ಸೇವೆ ಮಾಡಿದಂತೆ. ನಿಷ್ಕಲ್ಮಶ ಮನಸ್ಸಿನಿಂದ ಮಾದಪ್ಪನ ಹೆಸರಿನಲ್ಲಿ ಕಾರ್ಯನಿರ್ವಹಿಸಬೇಕು. ಹಾಗೆಯೇ ಸಂಘಟನೆ ಮೂಲಕ ಸರ್ಕಾರದ ಸೌಕರ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವದಂತೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಿದರೆ ಫಲ ಖಂಡಿತ ಲಭಿಸುತ್ತದೆ. ಈ ದಿಸೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮ ಕಾರ್ಯವೈಖರಿ ಮೆಚ್ಚುವಂತಹದ್ದು ಹಾಗೂ ಅಭಿವೃದ್ಧಿಗೆ ಸಹಾಯಕಾರಿ ಎಂದರು.


ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಮಾತನಾಡಿ, ಪುಣ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಗಳಿಗೆ ಆಸ್ಪದ ನೀಡಬಾರದು. ಸಂಘದ ಅಭಿವೃದ್ಧಿಗೆ ಪ್ರಾಧಿಕಾರದ ವತಿಯಿಂದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.


ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಆನಂದಯ್ಯ, ಪ್ರಾಧಿಕಾರದ ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ನೌಕರರ ಸಂಘದ ಅಧ್ಯಕ್ಷ ಬಿ.ಮಹದೇವಪ್ರಸಾದ್, ಗೌರವಾಧ್ಯಕ್ಷ ಕೆ.ಮಹದೇವಸ್ವಾಮಿ, ಉಪಾಧ್ಯಕ್ಷರಾದ ಪಿ.ಮಹದೇವಸ್ವಾಮಿ, ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಿ.ಮಹದೇವಸ್ವಾಮಿ, ಕಾರ್ಯದರ್ಶಿ ಚಿನ್ನಸ್ವಾಮಿ, ಕಾನೂನು ಸಲಹೆಗಾರ ಪ್ರಮೋದ್ ಚಿಕ್ಕಮಣ್ಣೂರ್, ಬೇಡಗಂಪಣ ಸಂಘದ ಗೌರವಾಧ್ಯಕ್ಷ ಪುಟ್ಟಣ್ಣ, ಗ್ರಾಪಂ ಅಧ್ಯಕ್ಷ ಕುಮಾರ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕಿರಣ್‌ರಾಜು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net