

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಮೂಲಕ ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ತಮಿಳುನಾಡು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇಗುಲದಲ್ಲಿ ಜರುಗಿದ ಎಣ್ಣೆ ಮಜ್ಜನ ಸೇವೆ, ಅಮಾವಾಸ್ಯೆ ವಿಶೇಷ ಪೂಜೆ, ಚಿನ್ನದ ತೇರು, ಹುಲಿವಾಹನ, ರುದ್ರಾಕ್ಷಿವಾಹನ, ಬಸವ ವಾಹನ ಸೇರಿದಂತೆ ಉತ್ಸವಗಳಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಬೆಳಗ್ಗೆ ಜರುಗಿದ ಮಹಾ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು.
ದೇಗುಲದ ರಾಜಗೋಪುರ ಮುಂಭಾಗದಲ್ಲಿ ಕೊಂಡವನ್ನು ನಿರ್ಮಿಸಿ ತಳಿರು-ತೋರಣದಿಂದ ಸಿಂಗಾರ ಮಾಡಲಾಗಿತ್ತು. ಮಂಗಳವಾರ ರಾತ್ರಿ 8 ಗಂಟೆಗೆ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಬೆಳಗ್ಗೆಯಿಂದಲೇ ಉಪವಾಸವಿದ್ದ 12 ಮಂದಿ ಬೇಡಗಂಪಣ ಅರ್ಚಕರು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸ್ವಾಮಿಗೆ ಪೂಜೆ ಸಲ್ಲಿಸಿದರು.
ದೇಗುಲದಲ್ಲಿ 3ನೇ ಅಭಿಷೇಕದ ಪೂಜೆಯ ಬಳಿಕ ದೇಗುಲದಿಂದ ಸತ್ತಿಗೆ, ಸೂರಿಪಾನಿ, ನಂದಿಕಂಬ, ಶಂಖ, ಜಾಗಟೆ ಹಾಗೂ ವಾದ್ಯ ಮೇಳದೊಂದಿಗೆ ಮೆರವಣಿಗೆಯ ಮೂಲಕ ತಂಬಡಗೇರಿಗೆ ತೆರಳಿ ಮಾದಪ್ಪನು ಊಟ ಸವಿದಿದ್ದ ದುಂಡಮ್ಮನ ಮನೆಯಲ್ಲಿ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಡಾವಣೆಯಲ್ಲಿ ಮೆರವಣಿಗೆ ನಡೆಸಲಾಯಿತು. ವೀರಗಾಸೆ ವಸ್ತ್ರವನ್ನು ಧರಿಸಿ ಹಣೆಗೆ ವಿಭೂತಿ, ಕೈಯಲ್ಲಿ ಖಡ್ಗವನ್ನು ಹಿಡಿದು ವೀರಾವೇಶದ ಕುಣಿತದೊಂದಿಗೆ ಭಕ್ತಿ ಭಾವದಿಂದ ಕೊಂಡವನ್ನು ಹಾಯ್ದರು. ನಂತರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊಂಡೋತ್ಸವದ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂದು ಜೈಕಾರ ಹಾಕುವ ಮೂಲಕ ಕೊಂಡವನ್ನು ಹಾಯುವ ಅರ್ಚಕರಲ್ಲಿ ಉತ್ಸಾಹ ಮೂಡಿಸಿದರು. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಬೇಡಗಂಪಣ ಅರ್ಚಕ ಕೆ.ವಿ.ಮಾದೇಶ್, ಪಾರುಪತ್ತೆದಾರ ಮಲ್ಲಿಕಾರ್ಜುನ, ಸರಗೂರು ಮಹದೇವಸ್ವಾಮಿ, ಪ್ರಾಧಿಕಾರದ ನೌಕರರು ಇದ್ದರು.