ಮಾದಪ್ಪನ ಸನ್ನಿಧಿಗೆ ಭಕ್ತರ ದಂಡು

01 HANUR 1
Published on

ಹನೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಭಾನುವಾರ ಸಾವಿರಾರು ಭಕ್ತರು ಭೇಟಿ ನೀಡಿ, ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.

ದೇಗುಲವನ್ನು ತಳಿರು ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಗೆ ಮುಂಜಾನೆ 3.30 ರಿಂದ 6 ಗಂಟೆವರೆಗೆ ಅಭಿಷೇಕ, ಅರ್ಚನೆ, ಏಕವಾರು ರುದ್ರಾಭಿಷೇಕ, ಸಂಕಲ್ಪ ಬಿಲ್ವಾರ್ಚನೆ, ನವರತ್ನ ಕೀರಿಟಧಾರಣೆ, ಧೂಪಧಾರತಿ ಸೇರಿದಂತೆ ಇತರ ಪೂಜಾ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ ಬೆಳಗಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಉತ್ಸವದಲ್ಲಿ ಭಾಗಿಯಾದ ಭಕ್ತರು: ಭಕ್ತರು ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ಉತ್ಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹರಕೆ ಹೊತ್ತ ಭಕ್ತರು ಧನ, ಧಾನ್ಯ ಸೇರಿದಂತೆ ಇತರ ವಸ್ತುಗಳನ್ನು ಎಸೆದು ಪುನೀತರಾದರು.

ಸೇವೆಗಳಲ್ಲಿ ಭಾಗಿ: ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ (ದೇವಸ್ಥಾನದ ಸುತ್ತ ಕಸ ತೆಗೆಯುವ ಕಾರ್ಯ) ಕೈಗೊಳ್ಳುವುದರ ಮೂಲಕ ಹರಕೆ ತೀರಿಸಿದರು. ಕೆಲವರು ವಿಶೇಷ ಪೂಜಾ ಸೇವೆ ನೆರವೇರಿಸಿದರು. ಚಾಮರಾಜ ನಗರ, ಮೈಸೂರು, ಬೆಂಗಳೂರು, ಚನ್ನಪಟ್ಟಣ, ರಾಮನಗರ, ಕನಕಪುರ, ಮದ್ದೂರು, ಮಳವಳ್ಳಿ, ಮಂಡ್ಯ ಹಾಗೂ ಇತರ ಕಡೆಗಳಿಂದ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದರು.

ದೇವರ ಸನ್ನಿಧಿಯಲ್ಲೇ ಹೊಸವರ್ಷ ಆಚರಿಸಿದ ಭಕ್ತರು: ಹೊಸ ವರ್ಷವನ್ನು ದೇವರ ಸನ್ನಿಧಿಯಲ್ಲಿಯೇ ಆಚರಿಸಬೇಕು ಎನ್ನುವ ಸಲುವಾಗಿ ಹರಕೆ ಹೊತ್ತಿದ್ದ ಸಾವಿರಾರು ಭಕ್ತರು 2 ದಿನದ ಹಿಂದೆಯೇ ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ಆಗಮಿಸಿದ್ದರು. ಈ ಮೂಲಕ ಹೊಸ ವರ್ಷವನ್ನು ಮಾದಪ್ಪನ ಸನ್ನಿಧಿಯಲ್ಲೇ ಆಚರಿಸಿದರು. ಕೆಲ ಭಕ್ತರು ಕಾಲ್ನಡಿಗೆ ಮೂಲಕ ನಾಗಮಲೆಗೂ ತೆರಳಿ ಪೂಜೆ ಸಲ್ಲಿಸಿದರು. ಪ್ರಾಧಿಕಾರದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ, ದಾಸೋಹ, ನೆರಳಿನ ವ್ಯವಸ್ಥೆ ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಮ.ಬೆಟ್ಟದ ಪೋಲಿಸರು ಸೂಕ್ತ ಬಂದೊಬಸ್ತ್ ಕಲ್ಪಿಸಿದ್ದರು.
ಒಂದೇ ದಿನದಲ್ಲಿ 13.84 ಲಕ್ಷ ರೂ. ಸಂಗ್ರಹ

ಮ.ಬೆಟ್ಟಕ್ಕೆ ಶನಿವಾರ ಸಾವಿರಾರು ಭಕ್ತರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ವಿವಿಧ ಮೂಲಗಳಿಂದ ಒಂದೇ ದಿನದಲ್ಲಿ 13,84,075 ರೂ. ಸಂಗ್ರಹವಾಗಿದ್ದು, ಪ್ರಾಧಿಕಾರಕ್ಕೆ ಆದಾಯ ಸಂದಿದೆ.

ಇದರಲ್ಲಿ ಚಿನ್ನದ ತೇರು, ಬಸವ, ಹುಲಿ ಹಾಗೂ ರುದ್ರಾಕ್ಷಿ ಉತ್ಸವ ವಾಹನದ ಸೇವೆಗಳಿಂದ 4,76,082 ರೂ., ವಿಶೇಷ ಸೇವೆಗಳಿಂದ 46,600 ರೂ., ಬೆಳ್ಳಿ ತೇರಿನ ಉತ್ಸವದಿಂದ 11,000 ರೂ., ಲಾಡು ಮಾರಾಟದಿಂದ 4,99,525 ರೂ., ಮಿಶ್ರಪ್ರಸಾದ ಮಾರಾಟದಿಂದ 46,875 ರೂ., ಕಲ್ಲು ಸಕ್ಕರೆ ಮಾರಾಟದಿಂದ 12,000 ರೂ., ಮಾಹಿತಿ ಕೇಂದ್ರದಿಂದ 1,08,800 ರೂ., ಅಕ್ಕಿ ಸೇವೆಯಿಂದ 90,003 ರೂ., ವಿಶೇಷ ಪ್ರವೇಶ ಶುಲ್ಕದಿಂದ 27,250 ರೂ., ದಿನದರ್ಶಿಕೆಯಿಂದ 28,500 ರೂ. ಹಣ ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net