ಮಾದಪ್ಪನ ನೆಲದಲ್ಲಿ ಮಾದರಿ ಕೃಷಿ

11-kglphoto-1
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 32;
Published on

ಕೊಳ್ಳೇಗಾಲ: ಕಲ್ಲು, ಮಣ್ಣಿನಿಂದ ಕೂಡಿರುವ ಗುಡ್ಡಗಾಡಿನಲ್ಲಿ ಬೆಳೆಯುತ್ತಿರುವ ಬೆಳೆ ಮಾದಪ್ಪನ ಗುಡಿಗೆ ಪ್ರಸಾದವಾಗುತ್ತಿದೆ. ನೀರಾವರಿ ಸೌಲಭ್ಯವಿಲ್ಲದ ಮಳೆಯಾಶ್ರಿತ ಬಂಜರು ಭೂಮಿಯಲ್ಲಿ ಬಂಗಾರದಂತಹ ಫಸಲು ಬೆಳೆಯಲಾಗುತ್ತಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡು 108 ಅಡಿ ಎತ್ತರದ ಮಲೆ ಮಹದೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಅಚ್ಚರಿಯ ಜಾಗ ಮಾತ್ರವಲ್ಲ. ವಿಗ್ರಹದ ಬುಡದಲ್ಲೇ ನೆಲೆ ನಿಂತಿರುವ ಮಾದಪ್ಪನ ಮಕ್ಕಳ ಬದುಕು ಮತ್ತು ಕಾಯಕದ ಭೂಮಿ. ಈ ಬೆಟ್ಟದ ಮೇಲೊಂದು ಮನೆ ಮಾಡಿಕೊಂಡು, ಕೃಷಿ ನಂಬಿಕೊಂಡು ಬದುಕುತ್ತಿರುವ ಮಾದೇಶ್ ಮತ್ತು ದೇವಿ ದಂಪತಿ ಬೇಡಗಂಪಣ ಕುಲದವರು. ಮಾದಪ್ಪನಿಗೆ ಪೂಜೆ ಮಾಡುವ ತಮ್ಮಡಿಗಳಾಗಿರುವ ಇವರು ತಾವು ಬೆಳೆದ ಬೆಳೆಯಲ್ಲಿ ಒಂದಿಷ್ಟು ಭಾಗವನ್ನು ಸ್ವಾಮಿಯ ಪ್ರಸಾದಕ್ಕೆ ಉದಾರವಾಗಿ ಭಕ್ತಿಯಿಂದ ನೀಡುತ್ತಾರೆ. ಹೀಗಾಗಿ ತಮಗಾಗಿ ಮಾತ್ರವಲ್ಲದೆ, ದೇವರ ಪ್ರಸಾದ ಸೇವೆಗಾಗಿಯೂ ಕೃಷಿ ಮಾಡುವ ಭಕ್ತ ರೈತ ಕುಟುಂಬ ಇರುವುದೇ ಒಂದು ವಿಶೇಷ.

ನೈಸರ್ಗಿಕ ಕೃಷಿಯಲ್ಲಿ ಹಲವು ಬೆಳೆ:

ಗುಡ್ಡದಲ್ಲಿರುವ ಮೂರುವರೆ ಎಕರೆ ಜಮೀನಿನಲ್ಲಿ ರಾಗಿ, ಭತ್ತ, ಮೂಲಂಗಿ, ಕ್ಯಾರೆಟ್, ಸೊಪ್ಪುಗಳು, ಅವರೆಕಾಯಿ, ಟೊಮ್ಯಾಟೋ, ಮೆಣಸಿನಕಾಯಿ, ಬೀನ್ಸ್, ಸೋರೆಕಾಯಿ, ಬದನೆಕಾಯಿ ಇನ್ನಿತರ ಫಸಲನ್ನು ಇವರು ಬೆಳೆದಿದ್ದಾರೆ. ಕಳೆದ ಸಲ ರಾಗಿ, ಭತ್ತ ಬೆಳೆದಿದ್ದರು. ಅಕ್ಕಿಯನ್ನು ಮನೆ ಬಳಕೆ ಮತ್ತು ಮಹದೇಶ್ವರ ದೇವಸ್ಥಾನದಲ್ಲಿ ತಮ್ಮ ಸರದಿ ಬಂದಾಗ ಪ್ರಸಾದ ತಯಾರಿಕೆಗೆ ಬಳಕೆ ಮಾಡಲು ಇಟ್ಟುಕೊಂಡಿದ್ದಾರೆ.

ನೈಸರ್ಗಿಕ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರ ಭೂಮಿ ರಾಸಾಯನಿಕಮುಕ್ತವಾಗಿದೆ. ನೀರಾವರಿ ಸೌಲಭ್ಯವಿಲ್ಲದೆ ಮಳೆಯನ್ನೇ ಆಶ್ರಯಿಸಿರುವ ಭೂಮಿ ಜೀವಂತಿಕೆಯಿಂದ ಕೂಡಿದೆ ಎಂಬುದೇ ಗಮನೀಯ ಸಂಗತಿ. ಕೊಟ್ಟಿಗೆ ಗೊಬ್ಬರದ ಬಳಕೆಯಿಂದಾಗಿ ಮಣ್ಣಿನಲ್ಲಿ ಲವತ್ತತೆ ಇದೆ. ಜಮೀನಿನಲ್ಲಿ ಬೆಳೆದ ರಾಗಿ ಸಮೃದ್ಧವಾಗಿ ತೆನೆ ಕಟ್ಟುತ್ತಿದೆ. ಅವರೆಕಾಯಿ ನೆಲದ ತುಂಬೆಲ್ಲಾ ಹಬ್ಬಿ ಹೂ ಬಿಟ್ಟಿದೆ. ಗಿಡದಲ್ಲಿ ಬೀನ್ಸ್, ಮೆಣಸಿನಕಾಯಿ ಜೋತು ಬಿದ್ದಿವೆ. ಮೂಲಂಗಿ, ಕ್ಯಾರೆಟ್ ರೋಗಬಾಧೆ ಇಲ್ಲದೆ ನಳನಳಿಸುತ್ತಿವೆ.

ಗುಡ್ಡಗಾಡು ವ್ಯವಸಾಯದಲ್ಲಿ ಬೆಟ್ಟದಷ್ಟು ಸವಾಲುಗಳು

ಕುಡಿಯುವ ನೀರಿಗಾಗಿಯೇ ಪರದಾಡುವ ಗುಡ್ಡಗಾಡಿನಲ್ಲಿ ಕೃಷಿ ಮಾಡುವುದು ಸುಲಭದ ಮಾತಲ್ಲ. ಸಾಲು ಸಾಲು ಬೆಟ್ಟದಷ್ಟು ಸವಾಲುಗಳ ನಡುವೆ ಫಸಲು ತೆಗೆಯುವುದು ಎಂದರೆ ಅದು ಸಾಮಾನ್ಯದ ವಿಷಯವಲ್ಲ. ಬೆಳೆಗೆ ನೀರಿಲ್ಲ. ಬೋರ್ ವ್ಯವಸ್ಥೆ ಇಲ್ಲ. ಬೇಸಿಗೆ ಕಾಲ, ಚಳಿಗಾಲ, ಮಳೆಗಾಲಕ್ಕೆ ಅನುಗುಣವಾಗಿ ಕೃಷಿ ಮಾಡಬೇಕು. ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಕ್ಕೆ ಭೂಮಿಯಲ್ಲಿ ತೇವಾಂಶ ಕಡಿಮೆ ಆಗಿ ಬೆಳೆ ಒಣಗುವಾಗ ಗುಡ್ಡದ ಕೆಳಗಿರುವ ತೊಂಬೆಗಳಲ್ಲಿ ನೀರನ್ನು ಬಿಂದಿಗೆಗಳಲ್ಲಿ ಹಿಡಿದು, ಹೊತ್ತುಕೊಂಡು ತಂದು ಬೆಳೆಗೆ ಒದಗಿಸಬೇಕು. ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಸುಲಭ ಬೇಸಾಯಕ್ಕೆ ದಾರಿ ಮಾಡಿಕೊಡುತ್ತಿದೆ. ಇಂತಹ ವೈಜ್ಞಾನಿಕ ಯುಗದಲ್ಲಿ ಯಂತ್ರಗಳನ್ನು ಖರೀದಿಸಿ ಕೃಷಿ ಮಾಡುವುದಕ್ಕೆ ಗುಡ್ಡಗಾಡಿನ ಜನರಿಗೆ ಆರ್ಥಿಕ ಸ್ಥಿತಿ ಅಡ್ಡಿಯಾಗಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ನಾಟಿ ದನಗಳನ್ನು ಬಳಸಿಕೊಂಡು ಉಳುಮೆ ಮಾಡಿ ಕೃಷಿ ಮಾಡಲಾಗುತ್ತಿರುವುದು ವಿಶೇಷವಾಗಿದೆ.

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದಿಲ್ಲ

ರೈತರ ವ್ಯವಸಾಯ ಚಟುವಟಿಕೆಗಳಿಗೆ ಸಹಕಾರ ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಇಲಾಖೆಯು ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್, ಟಿಲ್ಲರ್, ಟಾರ್ಪಾಲ್ ಕೃಷಿ ಸಲಕರಣೆಗಳು ಹಾಗೂ ಕೃಷಿ ತರಬೇತಿಗಳನ್ನು ನೀಡುತ್ತದೆ. ಆದರೆ, ಇಲ್ಲಿಯವರೆಗೂ ಒಂದು ಯೋಜನೆಯ ಪ್ರಯೋಜನವನ್ನೂ ನಾವು ಪಡೆದುಕೊಂಡಿಲ್ಲ. ಯಾವೊಬ್ಬ ಅಧಿಕಾರಿಯೂ ಗುಡ್ಡ- ಬೆಟ್ಟ ಹತ್ತಿ ಇಲ್ಲಿಗೆ ಬಂದು ಕೃಷಿಕರ ಕಷ್ಟದ ಬದುಕನ್ನು ನೋಡಿಲ್ಲ ಎಂದು ರೈತ ಮಹಿಳೆ ದೇವಿ ಬೇಸರದಿಂದಲೇ ಹೇಳುತ್ತಾರೆ.

ಸಾಟಿ ವಿನಿಮಯ ಪದ್ಧತಿ ಜಾರಿಯಲ್ಲಿದೆ

ಮಾದೇಶ್ - ದೇವಿ ದಂಪತಿ ಗತಕಾಲದ ವೈಭವವಾದ ಸಾಟಿ ವಿನಿಮಯ ಪದ್ಧತಿಯನ್ನು ಮುನ್ನಡೆಸುವ ಮೂಲಕ ಆದರ್ಶ ಸಾವಯವ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇವರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಕಾಸಿಗೆ ಮಾರಾಟ ಮಾಡುವುದಿಲ್ಲ. ಅಕ್ಕಪಕ್ಕದ ಮನೆಯರಿಗೆ ಕೊಟ್ಟು, ಅವರು ಬೆಳೆದ ಬೆಳೆಯನ್ನು ಇವರು ಪಡೆದುಕೊಂಡು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪುರಾತನ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ರಾಗಿ ಕೊಟ್ಟರೆ ಅಕ್ಕಿ ಪಡೆಯುವುದು, ತರಕಾರಿ ಕೊಟ್ಟರೆ ಸೊಪ್ಪು, ಕಾಳುಗಳನ್ನು ಪಡೆಯುತ್ತಾರೆ.

ದೇಸಿ ದನಗಳ ಸಂಗೋಪನೆ ಸಾವಯವ ಕೃಷಿ ಜತೆಗೆ ಈ ಕುಟುಂಬ ದನಗಳನ್ನು ಪಾಲನೆ ಮಾಡುತ್ತಿದ್ದಾರೆ. 30ಕ್ಕೂ ಹೆಚ್ಚು ದೇಸಿ ದನಗಳನ್ನು ದೊಡ್ಡಿಗಳಿಗೆ ಕರೆದೊಯ್ದು ಮೇಯಿಸುತ್ತಾರೆ. ಆಡು, ಕುರಿಗಳನ್ನೂ ಸಾಕಿದ್ದಾರೆ. ದನಗಳ ಸಗಣಿಯಿಂದ ಮಾಡುವ ಗೊಬ್ಬರಗಳನ್ನೇ ಕೃಷಿ ಭೂಮಿಗೆ ಹಾಕುತ್ತಾರೆ. ಆರೋಗ್ಯಕರ ಫಸಲನ್ನು ಬೆಳೆಯುತ್ತಾರೆ.

ಕೃಷಿ ಬಿಟ್ಟರೆ ಬೇರೆ ಕೆಲಸ ನಮಗೆ ಗೊತ್ತಿಲ್ಲ. ದೀಪದ ಒಡ್ಡಿನಲ್ಲಿ ಕುಡಿಯುವ ನೀರಿಗೇ ತೊಂದರೆ ಇದೆ. ಆದರೂ ಮಳೆ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಬೆಳೆಯನ್ನು ನಾವು ಮಾರುಕಟ್ಟೆ ಅಥವಾ ಕಾಸಿಗೆ ಮಾರಾಟ ಮಾಡುವುದಿಲ್ಲ. ನೆರೆಹೊರೆಯವರಿಗೆ ಕೊಡುತ್ತೇವೆ. ನಮಗೆ ಅಗತ್ಯವಿರುವುದನ್ನು ಅವರಿಂದ ಪಡೆಯುತ್ತೇವೆ. ಇದರಲ್ಲಿ ನಮಗೆ ಸುಖ ಮತ್ತು ಸಂತೃಪ್ತಿ ಇದೆ. ದೇವಿ ರೈತ ಮಹಿಳೆ ದೀಪದ ಒಡ್ಡು. ಮಲೆ ಮಹದೇಶ್ವರ ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net