

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಶನಿವಾರ ರಾತ್ರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇಗುಲಕ್ಕೆ ಆಗಮಿಸಿದ ಸಚಿವರನ್ನು ಸಾಲೂರು ಬೃಹನ್ಮಠದ ಪೀಠಾಧಿಪತಿ ವಿದ್ವಾನ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಅವರು ಆತ್ಮೀಯವಾಗಿ ಬರಮಾಡಿ ಕೊಂಡರು. ಈ ವೇಳೆ ಸಚಿವರು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಗರ್ಭಗುಡಿಗೆ ತೆರಳಿ ದೇವರ ದರ್ಶನ ಪಡೆದರು. ಅರ್ಚಕರು ಇವರ ಹೆಸರಿನಲ್ಲಿ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಚಿನ್ನದ ತೇರಿನ ಉತ್ಸವದಲ್ಲಿ ಸಚಿವರು ಭಾಗಿಯಾಗಿದ್ದರು. ದೇಗುಲದ ಅಭಿ ವೃದ್ಧಿ ಹಾಗೂ ಪ್ರಾಧಿಕಾರದಿಂದ ಭಕ್ತರಿಗೆ ಮೂಲಸೌಕರ್ಯ ಸಂಬಂಧ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಾಲೂರು ಮಠಕ್ಕೂ ಭೇಟಿ: ನಂತರ ಸಾಲೂರು ಬೃಹನ್ಮಠಕ್ಕೆ ತೆರಳಿದ ಸಚಿವರು ಲಿಂಗೈಕ್ಯ ಮಹದೇವಸ್ವಾಮಿ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಮಠದ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಶ್ರೀಮಲೆಮಹದೇಶ್ವರ ಸ್ವಾಮಿ ಕೃಪಾ ಪೋಷಿತ ವಿದ್ಯಾ ಸಂಸ್ಥೆಗಳ ಬಗ್ಗೆ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದ ಸಚಿವರು ಉಪಾಹಾರ ಸೇವಿಸಿ ಬೆಂಗಳೂರಿಗೆ ಹಿಂತಿರುಗಿದರು. ತಮಿಳುನಾಡಿನ ಬರಗೂರು ದ್ರೋಣಮಠದ ಅಶೋಕ ರಾಜೇಂದ್ರ ಸ್ವಾಮೀಜಿ, ತಹಸೀಲ್ದಾರ್ ಆನಂದಯ್ಯ, ಡಿಡಿಪಿಐ ನಾಗಮಲ್ಲೇಶ್, ಬಿಇಒ ಶಿವರಾಜು, ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜು, ಲೆಕ್ಕ ಅಧೀಕ್ಷಕ ಪ್ರವೀನ್ ಪಟೇಲ್, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್. ದತ್ತೇಶ್‌ಕುಮಾರ್ ಇದ್ದರು.