

ಬೆಳಗಾವಿ: ಯುವಪೀಳಿಗೆ ಮಾದಕವಸ್ತುಗಳಿಗೆ ತುತ್ತಾಗುತ್ತಿದ್ದು, ಇದನ್ನು ತಡೆಗಟ್ಟುವಂತಹ ಜಾಗೃತಿ ಚಟುವಟಿಕೆಗಳನ್ನು ಶಿಕ್ಷಣ ಸಂಸ್ಥೆಗಳು ಕೈಗೊಳ್ಳುವುದು ಅವಶ್ಯ ಎಂದು ಮಾಳಮಾರುತಿ ಪಿಎಸ್‌ಐ ಶ್ರೀಶೈಲ ಹುಲಗೇರಿ ಹೇಳಿದರು.
ನಗರದ ಎಸ್‌ಜಿಬಿಐಟಿನಲ್ಲಿ ಕಾಯಕ ಕ್ಲಬ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಾದಕವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಶೆಯಿಂದ ಜಾಗೃತಿ ವರೆಗೆ ಮಾದಕದ್ರವ್ಯ ಮುಕ್ತ ಭಾರತಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ತಮ್ಮ ಸುತ್ತ ನಡೆಯುವ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು.
ಮಾದಕ ವಸ್ತುಗಳ ಜಾಲ ಪತ್ತೆಹಚ್ಚಲು ಸಹಾಯ ಮಾಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಪ್ರಾಚಾರ್ಯ ಡಾ.ಬಿ.ಆರ್. ಪಟಗುಂದಿ ಮಾತನಾಡಿ, ಮಾದಕ ವಸ್ತುಗಳಿಂದ ಯುವ ಮನಸ್ಸುಗಳನ್ನು ದೂರವಿಡಲು ಒಟ್ಟುಗೂಡಿ ಹೋರಾಡಬೇಕಿದೆ ಎಂದರು. ಡಾ.ಶೈಲಜಾ ಮಾಳಿ, ಸಿಬ್ಬಂದಿ ಇತರರಿದ್ದರು. ಪ್ರಜಕ್ತಾ ದಳವಾಯಿ ನಿರೂಪಿಸಿದರು. ಡಾ.ರಾಜೇಂದ್ರ ಗಲಗಲಿ ವಂದಿಸಿದರು.