ಮಾದಕ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ

WhatsApp Image 2024-06-26 at 12.21.49 PM
Published on

ಬಳ್ಳಾರಿ : ಯುವಜನತೆ ಮಾದಕ ವಸ್ತು ಸೇವನೆ ಮಾಡುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನೆ ಹೇಳಿದರು.
ನಗರದ ಬಿಐಟಿಎಂ‌ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಹಯೋಗದೊಂದಿಗೆ ಬುಧವಾರ ನಡೆದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತುಗಳು ವಿವಿಧ ರೂಪದಲ್ಲಿ ದೊರೆಯುತ್ತಿದ್ದು, ಹೊರ ದೇಶಗಳಿಂದಲು ಕಳ್ಳ ಸಾಗಣೆಯಾಗುತ್ತಿದೆ. ಇದರ ಸೇವನೆ ಹಾಗೂ ಕಳ್ಳ ಸಾಗಣೆ ಮಾಡುವುದು ಅಪರಾಧವಾಗಿದ್ದು, ಈ ಅಪರಾಧದಲ್ಲಿ ಪಾಲ್ಗೊಂಡರೆ ಕಾನೂನಿನಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಎಸ್ಪಿ ರಂಜಿತ್ ಕುಮಾರ ಬಂಡಾರು ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಕ್ರಮ ವಿದ್ಯಾಭ್ಯಾಸದ ಜೊತೆಗೆ ಮಾನಸಿಕ ಆರೋಗ್ಯವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತಿನ ಜೀವನ ಹಾಗೂ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋರೋಗ ತಜ್ಞ ಡಾ.ರೋಹನ್ ವನಗುಂದಿ ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಮುಖರಾದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಎಸ್ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಾಂತ್ರಣಾಧಿಕಾರಿ ಡಾ.ವಿ. ಇಂದ್ರಾಣಿ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಈಶ್ವರ್ ದಾಸಪ್ಪನವರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net