ಮಾದಕ ವ್ಯಸನಕ್ಕೆ ದಾಸರಾಗುತ್ತಿರುವ ಯುವಜನತೆ

mysore
Published on

ಮೈಸೂರು: ಮಾದಕ ವಸ್ತುಗಳ ಬಳಕೆಗೆ ಯುವಜನರು ದಾಸರಾಗುತ್ತಿದ್ದಾರೆ. ಇತ್ತೀಚೆಗೆೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಚಟಕ್ಕೆ ಅಂಟಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಮಾದಕ ವಸ್ತುಗಳ ಅಮಲಿನ ಘಾಟು ಅಲ್ಲಲ್ಲಿ ಕಾಣಸಿಗುತ್ತದೆ. ಮದ್ಯ, ಗಾಂಜಾ, ಗುಟ್ಖಾ, ಸಿಗರೇಟ್, ಡ್ರಗ್ಸ್, ರಾಸಾಯನಿಕ ಔಷಧಗಳು ಇತ್ಯಾದಿ ಯಾವುದೇ ರೀತಿಯ ಮಾದಕ ದ್ರವ್ಯ ಸೇವನೆಯು ತ್ವರಿತವಾಗಿ ಬೆಳೆಯುತ್ತಿರುವುದು ಭೀತಿ ಉಂಟು ಮಾಡಿದೆ. ವಯಸ್ಕರು ಮಾತ್ರವಲ್ಲದೇ ಹದಿಹರೆಯದವರು ಇದಕ್ಕೆ ಬಲಿಯಾಗುತ್ತಿದ್ದಾರೆ.

ತಿಳಿವಳಿಕೆ ಇಲ್ಲದ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದ ವಯಸ್ಸಿನಲ್ಲಿ ಮಕ್ಕಳು ಇಂತಹ ವ್ಯಸನಗಳಿಗೆ ದಾಸರಾಗುವುದು ತುಂಬ ಸುಲಭ. ಆದರೆ, ಇದರಿಂದ ಹೊರ ಬರುವುದು ಬಹಳ ಕಷ್ಟಕರ. ಇದಕ್ಕೆ ಸಿನಿಮಾ, ಡಿಜಿಟಲ್ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಉತ್ತೇಜನ ಕೊಡುತ್ತಿರುವುದು ವಿಷಾದನೀಯ.

ಮಾದಕ ವಸ್ತುಗಳ ದುಷ್ಪರಿಣಾಮಗಳು ಬಹಳ ಗಂಭೀರವಾಗಿರುತ್ತವೆ. ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅನಾರೋಗ್ಯ, ಅಪಘಾತಗಳು, ಅಪರಾಧ ಕೃತ್ಯಗಳು ಹೆಚ್ಚಿಸಿ ಸಾಮಾಜಿಕ ಸಂಬಂಧಗಳಿಗೂ ಹಾನಿ ಉಂಟು ಮಾಡುತ್ತದೆ.

ಆದ್ದರಿಂದ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವುದು, ವ್ಯಸನಿಗಳಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಸೌಲಭ್ಯ ಒದಗಿಸುವುದು, ಇದರ ಬಳಕೆಯನ್ನು ತಡೆಯಲು ಕಾನೂನುಗಳನ್ನು ಬಲಪಡಿಸುವುದು, ಕುಟುಂಬಗಳು ಮತ್ತು ಸಮುದಾಯಗಳು ಬೆಂಬಲ ನೀಡಬೇಕು,ಶಾಲಾ ಹಂತದಿಂದಲೇ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಶಿಕ್ಷಣ ನೀಡಬೇಕಿದೆ. ಮಾದಕ ವಸ್ತುಗಳ ದುಷ್ಪರಿಣಾಮಗಳನ್ನು ತಡೆಗಟ್ಟಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಲೌಡ್‌ಸ್ಪೀಕರ್‌ನಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ.

ಮಕ್ಕಳ ಗ್ರಾಮಸಭೆಯಲ್ಲಿ ಜಾಗೃತಿ

ಮಕ್ಕಳಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ದುಷ್ಪರಿಣಾಮಗಳ ಬಗ್ಗೆ ಮಕ್ಕಳ ಗ್ರಾಮಸಭೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ, ಡ್ರಗ್ಸ್ ಬಳಕೆ ಮಾಡುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಮೂಲಕ ಬೇಡಿಕೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದರೆ ಅದರ ಬಳಕೆ ನಿಲ್ಲಿಸಬಹುದು.

ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ

ಶಾಲಾ, ಕಾಲೇಜುಗಳಲ್ಲಿ ಅರಿವು

ಡ್ರಗ್ಸ್ ಬಳಕೆ ಬಗ್ಗೆ ದೂರು ನೀಡಲು ವೆಬ್‌ಸೈಟ್ ಇದ್ದು, ಅದರ ಮೂಲಕ ದೂರು ನೀಡಬಹುದು. ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಡ್ರಗ್ಸ್ ಬಳಕೆ ನಿಷೇಧ ಕುರಿತು ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವುದರಿಂದ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಈ ಸಂಬಂಧ ಎಲ್ಲ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ

ವಿಷ್ಣುವರ್ಧನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮಕ್ಕಳ ಚಲನವಲನ ಗಮನಿಸಬೇಕು

ಕಾಲೇಜ್ ಕ್ಯಾಂಪಸ್‌ನ 100 ಮೀಟರ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳು, ಮದ್ಯಪಾನ ಹಾಗೂ ಧೂಮಪಾನ ನಿಷೇಧಿಸಬೇಕೆಂಬ ಆದೇಶವಿದೆ. ಆದರೆ, ಇದು ಉಲ್ಲಂಘನೆಯಾಗುತ್ತಿದೆ. ಕಾಲೇಜಿನ ಒಳಗಡೆ, ಹೊರಗಡೆ ಮಾದಕ ವಸ್ತುಗಳನ್ನು ಅಕ್ರಮವಾಗಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿರುವ ಜಾಲ ಇದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಪತ್ತೆ ಹಚ್ಚಬೇಕು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಹಲವಾರು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳ ಚಲನವಲನ ಹಾಗೂ ಅವರು ಯಾರ ಜತೆ ಸಂಪರ್ಕದಲ್ಲಿದ್ದಾರೆ ಮತ್ತು ಸ್ನೇಹ ಬೆಳೆಸುತ್ತಾರೆ ಎಂಬುದರ ಬಗ್ಗೆ ತಿಳಿದಿರಬೇಕು.

ಡಾ.ಸುವರ್ಣ ಕಂಬಿ ಸಹಾಯಕ ಪ್ರಾಧ್ಯಾಪಕಿ, ಪತ್ರಿಕೋದ್ಯಮ ವಿಭಾಗ, ಜೆಎಸ್‌ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು

ಪಠ್ಯಕ್ರಮ ಅಳವಡಿಸಬೇಕು

ಮಾದಕ ವಸ್ತುಗಳನ್ನು ಸೇವಿಸಿದಾಗ ವ್ಯಕ್ತಿಯ ಮಾನಸಿಕ ಸ್ಥಿತಿ ಬದಲಾಗುತ್ತದೆ. ಹಲವಾರು ಕುಟುಂಬಗಳು ಇದರಿಂದ ಮಕ್ಕಳನ್ನು ಕಳೆದುಕೊಂಡು ಶೋಕದ ಕಡಲಲ್ಲಿ ಮುಳುಗಿವೆ. ಬದುಕಿ ಬಾಳಬೇಕಾದ ಮಕ್ಕಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು ಬೀದಿ ನಾಟಕಗಳ ರೂಪದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಶಾಲಾ, ಕಾಲೇಜುಗಳಲ್ಲಿ ಈ ಕುರಿತು ಪಠ್ಯಕ್ರಮ ಅಳವಡಿಸಿ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಬೇಕು. ಇದರಿಂದ ಆಗುವ ದುಷ್ಪರಿಣಾಮವನ್ನು ಅವರಿಗೆ ತಿಳಿಸಬೇಕು. ಈ ಮೂಲಕ ಮಾದಕ ವಸ್ತುಗಳ ಸೇವನೆ ತಡೆಗಟ್ಟಬಹುದು.

ಕೆ.ಎನ್.ವರುಣ್ ತೃತೀಯ ವರ್ಷದ ಬಿಎ ವಿದ್ಯಾರ್ಥಿ

ಮಿದುಳಿನ ಮೇಲೆ ದುಷ್ಪರಿಣಾಮ

ಭಾವನಾತ್ಮಕ ದುರ್ಬಲತೆ, ಸ್ನೇಹಿತರ ಪ್ರಭಾವ, ಶೈಕ್ಷಣಿಕ ಒತ್ತಡಗಳನ್ನು ನಿಭಾಯಿಸುವ ವಿಫಲತೆಗಳು ವ್ಯಸನಕ್ಕೆ ಯುವಕರನ್ನು ಸೆಳೆಯುತ್ತವೆ. ಕುತೂಹಲಕ್ಕೆ ಮತ್ತು ತಾತ್ಕಾಲಿಕವಾಗಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶುರುವಾಗುವ ವ್ಯಸನವು ದಿನ ಕಳೆದಂತೆ ಮಿದುಳಿನ ಮೇಲೆ ಪರಿಣಾಮ ಬೀರಿ ಏಕಾಗ್ರತೆಯ ಕೊರತೆ, ಖಿನ್ನತೆ, ಆತಂಕ, ನಿದ್ರಾಹೀನತೆ, ಸಮಸ್ಯೆ ಪರಿಹರಿಸುವಲ್ಲಿ ಸೋಲುವುದು ಹೀಗೆ ಹಲವಾರು ಮಾನಸಿಕ ಸಮಸ್ಯೆಗಳಿಗೆ ಎಡೆ ಮಾಡುತ್ತದೆ. ತಕ್ಷಣ ಎಚ್ಚೆತ್ತುಕೊಳ್ಳುವುದು ಅಗತ್ಯ. ಸೂಕ್ತ ಮಾರ್ಗದರ್ಶನ, ಶೈಕ್ಷಣಿಕ ಸಂಸ್ಥೆಗಳಲ್ಲಿ ಆಪ್ತ ಸಮಾಲೋಚನೆ, ಕುಟುಂಬದ ಬೆಂಬಲ, ಸಮಸ್ಯೆ ಮತ್ತು ಭಾವನೆ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡುವ ಮೂಲಕ ವ್ಯಸನದಿಂದ ಹೊರಬರಲು ಸಾಧ್ಯ.

ಡಾ.ಎಚ್.ಕೆ.ಮಂಜು ಮನೋವಿಜ್ಞಾನ ಸಹಾಯಕ ಪ್ರಾಧ್ಯಾಪಕ

ವ್ಯವಸ್ಥಿತ ಜಾಲವೇ ಇದೆ

ವಿದೇಶಗಳಿಂದ ವಿಮಾನದಿಂದಲೇ ದೇಶಕ್ಕೆ ಮಾದಕ ದ್ರವ್ಯಗಳು ಸರಬರಾಜು ಆಗುತ್ತಿದ್ದರೂ ಯಾವ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ನಗರಗಳಿಂದ ಗ್ರಾಮೀಣ ಪ್ರದೇಶಗಳಲ್ಲೂ ಯುವಜನರಿಗೆ ಬಹಳ ಸುಲಭವಾಗಿ ಲಭ್ಯವಾಗುತ್ತಿದೆ. ಇಂತಹ ವ್ಯವಸ್ಥಿತ ಅಕ್ರಮ ಜಾಲವೇ ಇದೆ. ಇದರಿಂದಾಗಿ ಅಪರಾಧ ಕೃತ್ಯಗಳಲ್ಲಿ ಯುವಜನರು ತೊಡಗುತ್ತಿದ್ದಾರೆ. ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ವಾತಾವರಣ ಸಹ ಕಲುಷಿತವಾಗುತ್ತಿದ್ದು, ಮಾದಕದ್ರವ್ಯ ಜಾಲದಿಂದ ಯುವಜನರನ್ನು ಮುಕ್ತಗೊಳಿಸಲು ಆಳ್ವಿಕರ ಪಾತ್ರವೇ ದೊಡ್ಡದಾಗಿದ್ದು, ದೇಶದಲ್ಲಿ ಸಂಪೂರ್ಣವಾಗಿ ಮಾದಕದ್ರವ್ಯವನ್ನು ನಿಷೇಧಿಸಲು ಕ್ರಮ ಕೈಗೊಂಡರೆ ಮಾತ್ರ ಯುವಜನರನ್ನು ಇಂತಹ ವ್ಯಸನದಿಂದ ಮುಕ್ತಗೊಳಿಸಲು ಸಾಧ್ಯ.

ಟಿ.ಆರ್.ಸುನಿಲ್ ಜಿಲ್ಲಾಧ್ಯಕ್ಷ, ಎಐಡಿವೈಒ

ದಾಸರಾದರೆ ಉಜ್ವಲ ಭವಿಷ್ಯ ಹಾಳು

ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರ ಇರಬೇಕು. ಇದಕ್ಕೆ ದಾಸರಾದರೆ ಉಜ್ವಲ ಭವಿಷ್ಯ ಹಾಳಾಗಿ, ಅನೇಕ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ಜತೆಗೆ, ಪಾಲಕರ ಕನಸು ಸಹ ನುಚ್ಚುನೂರಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳತ್ತ ಮಾತ್ರ ಗಮನ ನೀಡಬೇಕು. ಜತೆಗೆ, ಶಿಕ್ಷಣ ವಲಯದಲ್ಲಿ ಇದರ ಮಾರಾಟಕ್ಕೆ ಕಡಿವಾಣ ಹಾಕಿ, ವಿದ್ಯಾರ್ಥಿಗಳಿಗೆ ಕೈಗೆ ಸಿಗದಂತೆ ನೋಡಿಕೊಳ್ಳಬೇಕು.

ಸಿ.ಮಹೇಶ್

ಗೌರವಾಧ್ಯಕ್ಷ, ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ

ಸಮಾಜವು ಅಧೋಗತಿಯತ್ತ ಸಾಗಲಿದೆ

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಸಮಾಜವು ಮುಂಬರುವ ದಿನಗಳಲ್ಲಿ ಅಧೋಗತಿಯತ್ತ ಸಾಗುತ್ತದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಬರೀ ಮಾತಲ್ಲ. ಅವರೇ ಭವಿಷ್ಯದ ಮಹಾನ್ ವ್ಯಕ್ತಿಗಳು. ಆದರೆ ವಿದ್ಯಾರ್ಥಿಗಳು ಮಾದಕ ವಸ್ತುಗಳ ಲೋಕಕ್ಕೆ ಜಾರಿದ್ದಾರೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ವಿದ್ಯಾರ್ಥಿಗಳು ಅವರ ಭವಿಷ್ಯಕ್ಕೆ ಮತ್ತು ಆರೋಗ್ಯಕ್ಕೆ ಹಾಗೂ ಶಿಕ್ಷಣಕ್ಕೆ ಕೆಡಕು ಉಂಟು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯು ಗಂಭೀರ ದುಷ್ಪರಿಣಾಮ ಬೀರುತ್ತಿದೆ. ಸಮಾಜ ವಿರೋಧಿ ಚಟುವಟಿಕೆಗಳು, ಕುಟುಂಬದ ಮೇಲೆ ವೈಮನಸ್ಸು, ಓದಿನಲ್ಲಿ ಹಿಂದುಳಿಯುವುದು ಮುಂತಾದವುಗಳು. ಆದ್ದರಿಂದ ಇದನ್ನು ತಡೆಗಟ್ಟಲು ಸಾಕಷ್ಟು ದಾರಿಗಳಿವೆ.

ಎನ್.ಕೀರ್ತನಾ, ವಿದ್ಯಾರ್ಥಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net