

ಹೊಳೆನರಸೀಪುರ: ಮಾದಕ ವ್ಯಸನಕ್ಕೆ ತುತ್ತಾದಲ್ಲಿ ಯುವಕರ ಭವಿಷ್ಯವೇ ನಾಶವಾಗುವ ಸಂಭವವಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಎಚ್ಚರಿಸಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಮಹಂತ ಶಿವಯೋಗಿಗಳ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಾಲಕರು ಹಾಗೂ ಶಿಕ್ಷಕರ ಹಿತನುಡಿಗಳನ್ನು ಪಾಲಿಸುತ್ತಾ ವಿದ್ಯಾವಂತರಾಗಿ ಜೀವನ ರೂಪಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನ, ಜರ್ದಾ, ಬೀಡಾ ಇನ್ನಿತರ ದುಶ್ಚಟಗಳು ಮನುಷ್ಯನ ಜೀವನವನ್ನು ಸಾಶ ಮಾಡುತ್ತ, ಕುಟುಂಬ ನೆಮ್ಮದಿ ಹಾಳು ಮಾಡುತ್ತವೆ. ಆದ್ದರಿಂದ ಇಂತಹ ವಸ್ತುಗಳ ಸೇವನೆಯಿಂದ ದೂರು ಉಳಿದು ಇತರರಿಗೆ ಮಾಡಬೇಡಿ ಎಂಬ ಸಲಹೆ ನೀಡುವ ಮಟ್ಟಕ್ಕೆ ಯುವಕ, ಯುವತಿಯರು ಪ್ರಜ್ಞಾವಂತರಾಗಬೇಕಿದೆ ಎಂದರು.
ಬಿಇಒ ಸೋಮಲಿಂಗೇಗೌಡ ಮಾತನಾಡಿ, ಡಾ.ಮಹಂತ ಶಿವಯೋಗಿ ಅವರು ಇತರ ಮಠಗಳ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೆ, ಜೋಳಿಗೆ ಹಿಡಿದು ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂದು ಜನರಲ್ಲಿ ಅರಿವನ್ನು ಮೂಡಿಸುತ್ತಾ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಶ್ರೀಗಳ ಜನ್ಮದಿನದ ಆಚರಣೆಯೂ ಅರ್ಥಪೂರ್ಣವಾಗಿದೆ. ಜತೆಗೆ ಅವರು ತೋರಿದ ಮಾರ್ಗದಲ್ಲಿ ಸಾಗುತ್ತಾ, ಅವರ ಆದರ್ಶಗಳ ಪಾಲನೆ ಮಾಡಿದಲ್ಲಿ ಜೀವನ ಸುಂದರ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ ಎಂದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್‌ರಾವ್, ಉಪ ಪ್ರಾಂಶುಪಾಲ ರಂಗೇಶ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೌಸರ್ ಅಹಮದ್, ಉಪನ್ಯಾಸಕರಾದ ಸುಜಾತ ಅಲಿ, ಸತೀಶ್ ಹಾಗೂ ಪುಟ್ಟಸ್ವಾಮಿ ಇದ್ದರು.