

ಚಿತ್ರದುರ್ಗ: ಮಾದಕ ವಸ್ತುಗಳ ದಾಸರಾದರೆ ಬದುಕಿರುವಾಗಲೇ ನರಕ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾಸ್ಪತ್ರೆ ಮಾನಸಿಕ ಆರೋಗ್ಯ ತಜ್ಞ ಡಾ. ಮಂಜುನಾಥ್ ಎಚ್ಚರಿಸಿದರು.
ವ್ಯಸನಮುಕ್ತ ದಿನಾಚರಣೆ ಅಂಗವಾಗಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಶನಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಾದಕ ವಸ್ತು ಸೇವನೆ ವ್ಯಸನಕ್ಕೆ ತುತ್ತಾದರೆ ಅದು ವ್ಯಕ್ತಿಯನ್ನಲ್ಲದೆ ಆತನ ಕುಟುಂಬ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಮಿದುಳಿನಲ್ಲಿ ಕ್ಷಣಿಕ ಸುಖ ನೀಡುವ ಹಾರ್ಮೋನ್‌ನನ್ನು ಬಿಡುಗಡೆಗೊಳಿಸುವ ಹಾನಿಕಾರಕ ರಾಸಾಯನಿಕಗಳು ಮಾದಕ ವಸ್ತುಗಳಲ್ಲಿರುತ್ತವೆ ಎಂದರು.
ಶಮಾದಕ ವಸ್ತುಗಳ ವ್ಯಸನದಿಂದ ಹಲವು ದೈಹಿಕ,ಾನಸಿಕ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಚಾರ್ಯ ಎಚ್.ಬಿ.ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಕಡೆ ಗಮನಹರಿಸಬೇಕು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.
ಡೇಟ್‌ಚಾರಿಟೇಬಲ್ ಟ್ರಸ್ಟ್‌ನ ಗಾಯತ್ರಿ ಮಾತನಾಡಿ, ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಪನ್ಯಾಸಕರಾದ ರಾಘು, ಚನ್ನಬಸಪ್ಪ, ಡಾ.ಬಿ.ಗುರುನಾಥ್, ಶಶಿಧರ್ ಇದ್ದರು. ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ಡೇಟ್ ಚಾರಿಟೇಬಲ್ ಸೊಸೈಟಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
*ಕೋಟ್
ಯುವ ಜನರಿಗೆ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಯುವಜನತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ದುಶ್ಚಟಗಳಿಂದ ದೂರವಿರಬೇಕು.
ಬಿ.ವಿ.ತುಕಾರಾಂರಾವ್, ಜಿಲ್ಲಾ ವಾರ್ತಾಧಿಕಾರಿ