ಮಾದಕ ವಸ್ತುಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

28BK1
 ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಂಬಾಕು ಮತ್ತು ಮಾದಕ ವಸ್ತು ಸೇವನೆ ನಿಷೇಧ ಜಾಗೃತಿ ಅಭಿಯಾನವನ್ನು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಉದ್ಘಾಟಿಸಿದರು. ಸಿಪಿಐ ಅಲಿಸಾಬ್, ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ್, ಪಿಎಸ್‌ಐ ಅಂಬ್ರೀಶ ವಾಗ್ಮೋಡೆ, ರಾಚಯ್ಯ ಸ್ವಾಮಿ, ಸಿದ್ರಾಮಪ್ಪ ಮಾಲಿಪಾಟೀಲ, ಸೂರ್ಯಕಾಂತ ನಾಸೆ, ಜ್ಯೋತಿ ಪಂಡಿತ, ನಿಲೇಶ ಟೊಂಪೆ, ಉಲ್ಲಾಸ ಬೊಕ್ಕೆ ಇತರರಿದ್ದರು.
Published on

ಬಸವಕಲ್ಯಾಣ: ಮಾದಕ ವಸ್ತು ಸೇವನೆಯಿಂದ ವ್ಯಕ್ತಿ ಮೆದುಳು ಮತ್ತು ನರವ್ಯೋಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಋಣಾತ್ಮಕ ಅಂಶಗಳಿಂದ ದೂರವಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಧನಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು. ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಮಾದಕ ವಸ್ತು ಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಹುಮನಾಬಾದ್ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಹೇಳಿದರು.

ನಗರದ ಎಸ್‌ಎಸ್‌ಕೆ ಬಸವೇಶ್ವರ ಕಲಾ ವಿಜ್ಞಾನ ವಾಣಿಜ್ಯ ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ನಗರ ಪೋಲಿಸ್ ಠಾಣೆಯಿಂದ ಶನಿವಾರ ಆಯೋಜಿಸಿದ್ದ ತಂಬಾಕು ಮತ್ತು ಮಾದಕ ವಸ್ತು ಸೇವನೆ ನಿಷೇಧ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಯುವ ಶಕ್ತಿ ದಾರಿ ತಪ್ಪದಂತೆ ಜಾಗೃತವಾಗಿರಬೇಕಿದೆ ಎಂದರು.

ಮಾದಕ ವಸ್ತು ಸೇವನೆಯಿಂದ ಅನೇಕ ಯುವಕರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಲವರು ಜೀವ ಕಳೆದುಕೊಳ್ಳುತ್ತಿದ್ದಾರೆ. ತಂಬಾಕು ಮತ್ತು ಮಾದಕ ವಸ್ತು ಸೇವನೆ ನಿಷೇಧಕ್ಕಾಗಿ ಜನ ಜಾಗೃತಿ ಮೂಡಿಸುವುದೇ ಅಭಿಯಾನದ ಉದ್ದೇಶವಾಗಿದೆ. ಮಾದಕ ವಸ್ತು ತಯಾರಿಕೆ ಮತ್ತು ಮಾರಾಟ ಅಪರಾಧವಾಗಿದ್ದು, ಸಿಕ್ಕು ಬಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಪಿಐ ಅಲಿಸಾಬ್ ಮಾತನಾಡಿ, ಸಮಾಜದಲ್ಲಿ ಯುವಕರು ತಂಬಾಕು, ಸಿಗರೇಟು, ನಿಕೋಟಿವ್ ನಂತಹ ವಸ್ತುಗಳಿಗೆ ಆಕರ್ಷಿತರಾಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಇದರಿಂದ ದೂರವಿದ್ದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಕೆ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶಿವಕುಮಾರ ಪಾಟೀಲ ಮಾತನಾಡಿ, ಕಾನೂನುನ್ನು ಪಾಲಿಸುವ ಜತೆಗೆ ತಂಬಾಕು ಮತ್ತು ಮಾದಕ ವಸ್ತುಮುಕ್ತವಾದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.

ಪಿಎಸ್‌ಐ ಅಂಬ್ರೀಶ ವಾಗ್ಮೋಡೆ, ಪ್ರೊ.ಆರ್.ಡಿ.ಬಾಲಿಕಿಲೆ, ವಿಠೋಬಾ ಡೊಣ್ಣೆಗೌಡರ್, ಬಿಇಡಿ ಪ್ರಾಚಾರ್ಯ ರಾಚಯ್ಯ ಮಠಪತಿ, ಪಿಯು ಕಾಲೇಜು ಪ್ರಾಚಾರ್ಯ ಸಿದ್ರಾಮಪ್ಪ ಮಾಲಿಪಾಟೀಲ, ಗ್ರಂಥಪಾಲಕ ಸೂರ್ಯಕಾಂತ ನಾಸೆ, ನಿಲೇಶ ಟೊಂಪೆ, ಇಂದ್ರಜಿತ್ ರೆಡ್ಡಿ, ಭೀಮಾಶಂಕರ ಬಿ., ಶಿವಾನಂದ ಬಿರಾದಾರ, ಮಹಾದೇವ ದೇಗಾಂವ, ವೈಶಾಲಿ ಹಾವಶೆಟ್ಟಿ, ಶಿಲ್ಪಾರಾಣಿ ಖಿಂಡಿಮಠ, ಉಲ್ಲಾಸ ಬೊಕ್ಕೆ, ಪೂಜಾ ಇತರರಿದ್ದರು. ಎನ್‌ಸಿಸಿ ಅಧಿಕಾರಿ ಭೀಮಾಶಂಕರ ಪೂಜಾರಿ ಸ್ವಾಗತಿಸಿದರು. ಸುಮನರೆಡ್ಡಿ ನಿರೂಪಣೆ ಮಾಡಿದರು. ಭಾಗ್ಯಶ್ರೀ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net