

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿಕಿತ್ಸೆಗಿಂತ ರೋಗ ತಡೆಗಟ್ಟುವಿಕೆ ಬಹಳ ಮುಖ್ಯ ಎಂಬುದನ್ನು ನಾವು ಸಮಾಜಕ್ಕೆ ತಿಳಿಸಬೇಕು. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲೆ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಎಸ್‌ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಹೇಳಿದರು.
ನಗರದ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಮನೋರೋಗ ಚಿಕಿತ್ಸಾ ವಿಭಾಗ ಮತ್ತು ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ಶುಶ್ರೂಷಕಾ ವಿಭಾಗದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಅಭಯ ಮಟ್ಕರ ಮಾತನಾಡಿ, ಶೇ. 25ರಷ್ಟು ಜನರು ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮ ಎದುರಿಸುತ್ತಿದ್ದಾರೆ. ತಂಬಾಕಿನಲ್ಲಿನ ನಿಕೋಟಿನ್ ಬಾಯಿ ಕ್ಯಾನ್ಸರ್‌ಗೆ ಕಾರಣ. ಇಂದಿನ ಯುವ ಜನಾಂಗ ಮಾದಕ ವಸ್ತುಗಳ ವ್ಯಸನಿಯಾಗುವುದಕ್ಕಿಂತ ಪಠ್ಯೇತರ ಚಟುವಟಿಕೆ, ಯೋಗ ಮತ್ತು ಧ್ಯಾನದಂತಹ ಉತ್ತಮ ಅಭ್ಯಾಸ ಅನುಸರಿಸಬೇಕು. ಮಾದಕ ವ್ಯಸನಿಗಳು ತಮ್ಮ ಅಧ್ಯಯನ, ವೃತ್ತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದರು.
ಎಸ್‌ಡಿಎಂ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೊ. ಡೇವಿಡ್ ಕೋಲಾ, ವಿವಿ ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಎಸ್‌ಡಿಎಂ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ. ಬಲರಾಮ ನಾಯ್ಕ, ಆಸ್ಪತ್ರೆ ಉಪ ವೈದ್ಯಕೀಯ ಅಧೀಕ್ಷಕ ಡಾ. ಎಂ. ಕಿಲ್ಲೇದಾರ, ಇತರರು ಇದ್ದರು.
ಎಸ್‌ಡಿಎಂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನ ಮತ್ತು ತಂಬಾಕು ಸೇವನೆಗಳಿಂದ ಆಗುವ ದುಷ್ಪರಿಣಾಮ ಕುರಿತು ಬಿತ್ತಿ ಪತ್ರ ಪ್ರದರ್ಶಿಸಿದರಲ್ಲದೆ, ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶಿಸಿದರು.