ಮಾದಕ ವಸ್ತುಗಳಿಂದ ದೂರವಿದ್ದರೆ ಸದೃಢ ಸಮಾಜ

8 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿ ಜಾಗೃತಿ ಮೂಡಿಸಿ ಮಾದಕ ದ್ರವ್ಯ ಮತ್ತು ಕಳ್ಳ ಸಾಗಾಣಿಕೆ ತಡೆಯಬಹುದು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದರೆ ಸದೃಢ, ಸಚ್ಚಾರಿತ್ರೃ ಸಂಪನ್ಮೂಲ ವ್ಯಕ್ತಿ ಆಗುವುದರ ಜತೆಗೆ ಸದೃಢ ಸಮಾಜ ನಿರ್ಮಿಸಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಪರಶುರಾಮ ದೊಡ್ಡಮನಿ ಅಭಿಪ್ರಾಯಪಟ್ಟರು.
ಇಲ್ಲಿಯ ಕೆಪಿಇ ಸಂಸ್ಥೆಯ ಡಾ. ಜಿ.ಎಂ. ಪಾಟೀಲ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಾಗತಿಕ ಮಾದಕ ದ್ರವ್ಯ, ಕಳ್ಳ ಸಾಗಾಣಿಕೆ, ಹಾಗೂ ಮಾದಕ ವಸ್ತು ದುರುಪಯೋಗ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಿರುತ್ತವೆ. ಆದರೆ ಅದರಿಂದ ಆಗುವ ಅಪರಾಧಿಕ ಪರಿಣಾಮಗಳು ತಿಳಿದಿರುವುದಿಲ್ಲ. ಮಕ್ಕಳ ಭವಿಷ್ಯದಲ್ಲಿ ಪಾಲಕರ ಪಾತ್ರ ಮುಖ್ಯ. ಪಾಲಕರ ಪ್ರತಿ ನಡವಳಿಕೆಯನ್ನು ಮಕ್ಕಳು ಅನುಸರಿಸುತ್ತಾರೆ. ಹೀಗಾಗಿ ಪಾಲಕರು ವಿವೇಚನೆಯಿಂದ ವ್ಯವಹರಿಸುವುದರ ಜತೆಗೆ ಮಕ್ಕಳ ವಿಷಯಾಸಕ್ತಿ ಮತ್ತು ಇಚ್ಛೆಗೆ ತಕ್ಕಂತೆ ಒತ್ತಡ ಹಾಕದೆ ಬೆಳೆಸಬೇಕು ಎಂದರು.
ಡಾ. ರಂಗಸ್ವಾಮಿ ಮಾತನಾಡಿ, ಮಾದಕ ದ್ರವ್ಯದ ಬಳಕೆ ಮತ್ತು ಸಾಗಾಣಿಕೆ ಮಿತಿ ಇಲ್ಲದಷ್ಟು ವ್ಯಾಪಿಸುತ್ತಿದೆ. ಇದರ ನಿಯಂತ್ರಣ ಹಾಗೂ ಸಮಗ್ರವಾದ ಹತೋಟಿಗೆ ಸಾರ್ವತ್ರಿಕ ಅರಿವು ಮುಖ್ಯ ಎಂದರು.
ರಮೇಶ ಪಾಟೀಲ ಮಾತನಾಡಿ, ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಅದರಿಂದ ಆಗುವ ಆರ್ಥಿಕ ಹಾನಿ ಹಾಗೂ ಅಪರಾಧಗಳ ಪತ್ತೆ ಹಚ್ಚುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಬಿ.ವಿ. ಸೋಮಾಪುರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸಂಜೀವ ಪಾಟೀಲ, ಉಪನ್ಯಾಸಕರು, ವಿದ್ಯಾರ್ಥಿಗಳು, ಇತರರು ಇದ್ದರು. ಸುರೇಶ ಸ್ವಾಗತಿಸಿದರು. ಸುರೇಖಾ ಪೂಜಾರಿ ನಿರೂಪಿಸಿದರು. ವೀಣಾ ಪೂಜಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net