ಚಾಮರಾಜನಗರ: ಮಾದಕ ವಸ್ತುಗಳ ಸೇವನೆಯಿಂದ ಯುಜನಾಂಗದ ಭವಿಷ್ಯವೇ ಹಾಳಾಗುತ್ತಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಾದಕ ವಸ್ತುಗಳ ಸೇವನೆಯಿಂದ ವಿಮುಖರಾಗಬೇಕಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಸಲಹೆ ನೀಡಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಬಾರಿ ಮಾದಕ ವಸ್ತುಗಳಿಗೆ ಬಲಿಯಾದರೇ, ಅದರಿಂದ ಹೊರ ಬರುವುದು ಅತ್ಯಂತ ಕಷ್ಟವಾಗುತ್ತದೆ. ನಗರ ಪ್ರದೇಶದಲ್ಲಿ ಮಾತ್ರ ಇದು ಹೆಚ್ಚಾಗಿ ಕಂಡುಬರುತ್ತದ್ದು, ಗ್ರಾಮೀಣ ಭಾಗದ ಶಾಲಾ ಕಾಲೇಜುಗಳು ಇದರಿಂದ ಮುಕ್ತವಾಗಿದೆ. ಅದಾಗ್ಯೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಈ ತರಹದ ಯಾವುದೇ ಚಟುವಟಿಕೆಗಳಿಗೆ ಬಲಿಯಾಗದೇ ಜಾಗೃತಿ ವಹಿಸಬೇಕಿದೆ. ಈ ಮೂಲಕ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮಾದಕ ವಸ್ತುಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಮಾದಕ ವಸ್ತುಗಳ ಚಟಕ್ಕೆ ಬಲಿಯಾದರೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಮಾದಕ ವಸ್ತುಗಳ ಸೇವನೆಯಿಂದ ಮುಕ್ತವಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ವಿಷಯದ ವಸ್ತು ಮತ್ತು ಆಳ, ಭಾಷಣ ಮಂಡನೆಯ ವಿಧಾನ, ಆತ್ಮವಿಶ್ವಾಸ ಹಾಗೂ ಭಾಷಾ ಪ್ರೌಢಿಮೆಯ ಆಧಾರದ ಮೇಲೆ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಮಾದಕ ವಸ್ತುಗಳ ಸೇವನೆ ಹಾನಿಕಾರಕ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಪೊಲೀಸ್ ಉಪ ಅಧೀಕ್ಷಕ ಲಕ್ಷ್ಮಯ್ಯ, ಸಿಮ್ಸ್ ಆಸ್ಪತ್ರೆಯ ಮನೋ ವೈದ್ಯ ರಾಜೇಶ್, ತೀರ್ಪುಗಾರರಾದ ಪ್ರಾಧ್ಯಾಪಕ ಮಂಜುನಾಥ್, ಶಾಲಿನಿ ಹಾಗೂ ಇತರರು ಹಾಜರಿದ್ದರು.