

ಚಿಕ್ಕಬಳ್ಳಾಪುರ : ವ್ಯಸನಿಗಳು ಮಾದಕ ವಸ್ತುಗಳ ಸೇವನೆ ಬಿಡುವ ಸ್ವ ಇಚ್ಛೆಯ ನಿರ್ಧಾರ ಕೈಗೊಳ್ಳಬೇಕು. ಆಗ ಮಾತ್ರ ಸಮಸ್ಯೆ ಸುಳಿಯಿಂದ ಹೊರ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ಸಪ್ತಾಹಕ್ಕೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕ್ಷಣಿಕ ಸುಖಕ್ಕಾಗಿ ಅನೇಕರು ದುಶ್ಚಟಗಳಿಂದ ಉಜ್ವಲ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಬಗ್ಗೆ ಎಲ್ಲರೂತಿಳಿದುಕೊಳ್ಳಬೇಕು. ಜತೆಗೆ ಇತರರಲ್ಲೂ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.ಮಾದಕ ವಸ್ತುಗಳ ಸೇವನೆ ಮಾನಸಿಕ ಹಾಗೂ ದೈಹಿಕ ಬಲಹೀನ ಸಮಸ್ಯೆ ಸೃಷ್ಟಿಸುತ್ತವೆ, ಆದರೆ ಪ್ರತಿ ವರ್ಷವು ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಲೇ ಶೇ.90 ರಷ್ಟು ಅಪರಾಧ ಪ್ರಕರಣಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಆತಂಕ ವ್ಯಕ್ತಪಡಿಸಿದರು.ಕ್ಷಣಿಕ ಸುಖಕ್ಕಾಗಿ ಜೀವನ ಪೂರ್ತಿ ತೊಂದರೆ ಅನುಭವಿಸಲು ಕಾರಣವಾಗುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸರಿಯೇ? ಎಂಬುದನ್ನು ವ್ಯಸನಿಗಳು ಯೋಚಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ವಿ.ರಮೇಶ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಶಿವಕುಮಾರ್, ಮನೋವೈದ್ಯರಾದ ಡಿ.ಎನ್. ಕಿಶೋರ್, ಜಿ.ಹೇಮಂತ್ ಕುಮಾರ್, ಸುಬ್ರಹ್ಮಣ್ಯಂ ಇತರರಿದ್ದರು.
ಪ್ರತಿಜ್ಞಾ ವಿಧಿ ಸ್ವೀಕಾರ : ಉತ್ತಮ ಆರೈಕೆಗಾಗಿ ಉತ್ತಮ ಜ್ಞಾನ ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ಸಪ್ತಾಹ ಅಂಗವಾಗಿ ದುಶ್ಚಟಗಳಿಂದ ದೂರ ಉಳಿಯುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.