

ತುಮಕೂರು: ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ರಾಷ್ಟ್ರ ನಿಮಾರ್ಣಕ್ಕೆ ಅಮೂಲ್ಯ ಕೊಡುಗೆ ನೀಡಿದಾಗ ಭವ್ಯ ಭಾರತದ ಕನಸು ನನಸಾಗುತ್ತದೆ. ಯುವ ಜನತೆ ಎಲ್ಲ ರೀತಿಯ ಮಾದಕ ವಸ್ತುಗಳ ವ್ಯಸನದಿಂದ ಮುಕ್ತರಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ್ ತಿಳಿಸಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಚೇಳೂರು ಸಂಜೀವಿನಿ ಯುವಜನ ಸಂಘ, ಸುಫಿಯಾ ಕಾನೂನು ಮಹಾವಿದ್ಯಾಲಯ ಹಾಗೂ ಇನ್ಹರ್ ವೀಲ್ಕ್ಲಬ್ ಆಫ್ ತುಮಕೂರು ಸೆಂಟ್ರಲ್ ಸಹಯೋಗದಲ್ಲಿ ಗುರುವಾರ ಮಾದಕ ವ್ಯಸನ, ಮಾದಕ ವಸ್ತುಗಳ ದುಷ್ಪರಿಣಾಮ ಹಾಗೂ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ರಾಷ್ಟ್ರ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗಿ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿ ಎಂದರು.
ಸೈಬರ್ ಕ್ರೆೃಮ್ ಕುರಿತು ನಾಗರಿಕರು ಎಚ್ಚರಿಕೆಯಿಂದಿರಬೇಕು, ಇತ್ತೀಚೆಗೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಗಾಂಜಾ ಹಾಗೂ ಡ್ರಗ್ಸ್ ಸೇವನೆ ಮಾಡುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು, ಅಂತವರ ಮೇಲೆ ಎನ್ಡಿಪಿಎಸ್ ಆಕ್ಟ್ ಕಾಯಿದೆ ಅಡಿ ಕ್ರಮ ಜರುಗಿಸಲಾಗುವುದು ಎಂದರು.
ಸೈಬರ್ ಪ್ರಕರಣಗಳನ್ನು ತಡೆಯುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಸೈಬರ್ ಕ್ರೆೃಮ್ ಠಾಣೆಗಳನ್ನು ಸ್ಥಾಪಿಸಲಾಗಿದೆ, ಯಾರೇ ಆಗಲೀ ಕೌಟುಂಬಿಕ ಜೀವನದ ವೈಯಕ್ತಿಕ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದರು.
ಮಾಜಿ ಶಾಸಕ ಡಾ.ಎಸ್.ಷಫಿಅಹಮ್ಮದ್ ಮಾತನಾಡಿ, ಯುವಕರು ಸಾಮಾಜಿಕ ಸ್ಥಾನಮಾನ ಪಡೆದುಕೊಳ್ಳುವ ವೇಗದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿರುವುದು ಸರಿಯಲ್ಲ. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು. ನಿವೃತ್ತ ಆರೋಗ್ಯ ನಿರೀಕ್ಷಕ ರುದ್ರಮೂರ್ತಿ, ವೈದ್ಯೆ ಡಾ.ಶ್ರಾವ್ಯ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಕೆ.ರಾಜಶೇಖರ್, ಪ್ರಾಚಾರ್ಯ ಡಾ.ಎಸ್.ರಮೇಶ್, ಇನ್ಹರ್ ವೀಲ್ಕ್ಲಬ್ ಆಫ್ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಯಶೋಧ, ಕಾರ್ಯದರ್ಶಿ ಗಾಯತ್ರಿ, ಉಪನ್ಯಾಸಕಿ ಮಮತಾ, ಉಪಪ್ರಾಂಶುಪಾಲ ಓಬಯ್ಯ ಇದ್ದರು.