

ಹಾಸನ: ಗಡಿ ಪಾರಾಗಿ ತಪ್ಪಿಸಿಕೊಂಡು ಬಂದು ನಗರದಲ್ಲಿ ಕೊಲೆ ಯತ್ನ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ರೌಡಿಶೀಟರ್‌ನನ್ನುಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 31ರಂದು ರಾತ್ರಿ ಸಿದ್ದಯ್ಯ ನಗರದ ನಿವಾಸಿ ಮೊಹಮ್ಮದ್ ಇರ್ಫಾನ್ ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಶ್ರೀನಗರದ ನಿವಾಸಿ ಆದಿಲ್ (25)ಎಂಬಾತನನ್ನು ಸೋಮವಾರ ರಾತ್ರಿ 11.45ರ ಸಮಯದಲ್ಲಿ ಚನ್ನಪಟ್ಟಣ ಸರ್ಕಲ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿ ಈ ಹಿಂದೆ ಎಂಟು ಕೊಲೆ ಯತ್ನ, ಒಂದು ಸುಲಿಗೆ, 6 ಕಳ್ಳತನ, ಎರಡು ಎನ್‌ಡಿಪಿಎಸ್, ಸರ್ಕಾರಿ ನೌಕರರ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 20 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತನನ್ನು ಈಗಾಗಲೇ ಚಿಕ್ಕಮಂಗಳೂರು ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಅಲ್ಲಿಂದ ತಪ್ಪಿಸಿಕೊಂಡು ಬಂದು ನಗರದಲ್ಲಿ ಗಾಂಜಾ ಮಾರಾಟ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದ. ಸೋಮವಾರ ರಾತ್ರಿ ಖಚಿತ ಮಾಹಿತಿಯ ಮೇರೆಗೆ ನಗರ ಠಾಣೆಯ ಇನ್ಸ್‌ಪೆಕ್ಟರ್ ರೇವಣ್ಣ ಅವರ ನೇತೃತ್ವದಲ್ಲಿ ಸಿಬ್ಬಂದಿ ಈತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನ ನ್ಯಾಯಾಲಯಕ್ಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ರೀತಿ ಗಡಿ ಪಾರಾಗಿ ತಪ್ಪಿಸಿಕೊಂಡು ಬಂದು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ರೌಡಿಶೀಟರ್ ರಾಹಿಲ್ ಎಂಬಾತನನ್ನು ಕಳೆದ ಎರಡು ದಿನಗಳ ಹಿಂದೆ ವಶಪಡಿಸಿಕೊಳ್ಳಲಾಗಿತ್ತು.