

ಬಸವಕಲ್ಯಾಣ: ತಂಬಾಕು, ಗುಟ್ಖಾದಂಥ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದ ಸಿಪಿಐ ಅಲಿಸಾಬ್, ಯುವಕರು ಯಾವುದೇ ಕೆಟ್ಟ ಚಟಗಳಿಗೆ ಆಕರ್ಷಿತರಾಗದೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ನಗರ ಪೊಲೀಸ್ ಠಾಣೆ ಹಾಗೂ ಸಂಚಾರಿ ಪೊಲೀಸ್ ಠಾಣೆ ಸಹಯೋಗದಡಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ವಿರೋಧಿ ದಿನ ನಿಮಿತ್ತ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಗುರುವಾರ ಹಮ್ಮಿಕೊಂಡ ಬೈಕ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೀಡಿ, ಸಿಗರೇಟ್, ಗಾಂಜಾ ಸೇರಿ ಯಾವುದೇ ತರಹದ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಇವುಗಳಿಂದ ದೂರವಿರಬೇಕು ಎಂದರು.
ನಗರ ಠಾಣೆ ಪಿಎಸ್‌ಐ ಅಂಬರೀಶ್ ವಾಗ್ಮೋಡೆ ಮಾತನಾಡಿ, ಮಾದಕ ವಸ್ತುಗಳ ಸೇವನೆ, ಸಾಗಣೆ ಮತ್ತು ಮಾರಾಟ ಅಪರಾಧ. ಮಾದಕ ವಸ್ತುಗಳನ್ನು ಎಲ್ಲಿಯೇ ಯಾರಾದರೂ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ಕ್ರೈಂ ಪಿಎಸ್‌ಐ ಸುರೇಶ ಹಜ್ಜರಗಿ, ಸಂಚಾರಿ ಠಾಣೆ ಪಿಎಸ್‌ಐ ಸಿದ್ದೇಶ್ವರ, ಕ್ರೈಂ ಪಿಎಸ್‌ಐ ಸುಜಾತಾ ಕುನಾಳೆ ಇತರರಿದ್ದರು. ಗಾಂಧಿ ವೃತ್ತದಿಂದ ಮುಖ್ಯ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತ್ರಿಪುರಾಂತ ಮಡಿವಾಳ ವೃತ್ತದವರೆಗೆ ಬೈಕ್ ರ‍್ಯಾಲಿ ನಡೆಯಿತು.