

ಕೊಡಗು : ಕುಶಾಲನಗರ ಪಟ್ಟಣದಲ್ಲಿ ಖಚಿತ ಸುಳಿವು ಆಧರಿಸಿ ಮಾದಕ ವಸ್ತು ಮಾರುತ್ತಿದ್ದ ಇಬ್ಬರನ್ನು ಪೊಲೀಸರು ಮಂಗಳವಾರ ಮಾಲು ಸಮೇತ ಬಂಧಿಸಿದ್ದಾರೆ.
ಸೋಮವಾರಪೇಟೆ ನಿವಾಸಿ ಅಶ್ರಫ್ (40) ಮತ್ತು ಕೊಟ್ಟಮುಡಿ ನಿವಾಸಿ ಇಸ್ಮಾಯಿಲ್(31) ಬಂಧಿತರು. ನಿಷೇಧಿತ 19 ಗ್ರಾಂನಷ್ಟು ಎಂಡಿಎಂಎ ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಡಿವೈಎಸ್ಪಿ ಗಂಗಾಧರಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ.ಮಹೇಶ್ ಮಾರ್ಗದರ್ಶನದಲ್ಲಿ ಪಿಎಸೈ ರವೀಂದ್ರ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆಎಸ್‌ಪಿ ತಂತ್ರಾಂಶದ ಮೂಲಕ ಮಾಹಿತಿ ನೀಡಬೇಕು. ಮಾಹಿತಿ ಒದಗಿಸುವವರ ವಿವರ ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.