ಮಾದಕ ವಸ್ತು ಮಾರಾಟ ತಡೆಗೆ ಆಗ್ರಹ

Narcotics, Muddebihala, Madikeshwar, Kakhbhatti, Beer, Liquor, Ganja, Excise,
ಮುದ್ದೇಬಿಹಾಳ ಅಬಕಾರಿ ವಲಯ ನಿರೀಕ್ಷಕ ರವೀಂದ್ರ ಹೊಸಳ್ಳಿ ಅವರಿಗೆ ಮಡಿಕೇಶ್ವರ ಗ್ರಾಮದ ಮಹಿಳಾ ಸಂಘಟನೆಗಳ ಸದಸ್ಯರು ಮನವಿ ಸಲ್ಲಿಸಿದರು. ಬಸನಗೌಡ ಪಾಟೀಲ, ಗುರುರಾಜ ಬಡಿಗೇರ, ಬೋರಮ್ಮ ಹಿರೇಮಠ, ಮಹಾದೇವಿ ಕೆಂಭಾವಿ, ಅಯ್ಯಮ್ಮ ಹೈಯ್ಯಳ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮದ ಸರ್ಕಾರಿ ಶಾಲೆಯ ಸುತ್ತಮುತ್ತ ಮತ್ತು ಕೆಲವು ಅಂಗಡಿಗಳಲ್ಲಿ ಕಾನೂನು ಬಾಹಿರವಾಗಿ ಕಳ್ಳಭಟ್ಟಿ ಸಾರಾಯಿ, ಮದ್ಯ, ಗಾಂಜಾ ಇನ್ನಿತರ ಮಾದಕ ದ್ರವ್ಯ, ಮಾದಕ ವಸ್ತು ಮಾರಾಟ ನಡೆಯುತ್ತಿದೆ. ಕೂಡಲೇ ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿ ಗ್ರಾಮದ ಮಹಿಳಾ ಸಂಘಟನೆ, ಮಾನವ ಹಕ್ಕುಗಳ ಸಮಿತಿ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳು ಶುಕ್ರವಾರ ಇಲ್ಲಿನ ಅಬಕಾರಿ ವಲಯ ನಿರೀಕ್ಷಕ ರವೀಂದ್ರ ಹೊಸಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಮಾದಕ ಉತ್ಪನ್ನಗಳ ಬಳಕೆಯಿಂದ ಗ್ರಾಮದಲ್ಲಿ ನೆಮ್ಮದಿಯ ವಾತಾವರಣ ಇಲ್ಲವಾಗಿದೆ. ಈ ದುಶ್ಚಟಗಳಿಗೆ ಗ್ರಾಮದ ಯುವಕರು, ಹದಿ ಹರೆಯದವರು ಬಲಿಯಾಗತೊಡಗಿದ್ದಾರೆ. ಹಾಡು ಹಗಲೇ ಸಾರಾಯಿ, ಗಾಂಜಾ ಸೇವಿಸಿ ಅದೇ ಅಮಲಿನಲ್ಲಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಶಾಲಾ ಆವರಣದ ಸುತ್ತಲೂ ಮತ್ತು ಕೆಲವು ಅಂಗಡಿಗಳಲ್ಲಿ ಇವುಗಳನ್ನು ಮಾರಾಟ ಮಾಡುತ್ತಿರುವುದರಿಂದ ಶಾಲೆಯ ಪರಿಸರವೂ ಹಾಳಾಗತೊಡಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಅಕ್ರಮಗಳ ಕುರಿತು ಪಕ್ಕದ ಪಡೇಕನೂರ ಗ್ರಾಮದವರೇ ಆಗಿರುವ ರಾಜ್ಯ ಲೋಕಾಯುಕ್ತ ಬಿ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಉಪವಾಸ ಸತ್ಯಾಗ್ರಹ ನಡೆಸುವ ಪರಿಸ್ಥಿತಿ ಬರಬಹುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮನವಿಯ ಪ್ರತಿಗಳನ್ನು ಮುಖ್ಯಮಂತ್ರಿ, ಅಬಕಾರಿ ಸಚಿವರು, ಮುದ್ದೇಬಿಹಾಳ ಶಾಸಕರು, ಜಿಲ್ಲಾಧಿಕಾರಿ, ಎಸ್ಪಿ, ತಹಸೀಲ್ದಾರ್, ಡಿಎಸ್ಪಿ, ಸಿಪಿಐ, ಪಿಎಸ್‌ಐ ಅವರಿಗೆ ಸಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಬಿಜೆಪಿ ಮುಖಂಡ ಬಸನಗೌಡ ಪಾಟೀಲ, ಮಾನವ ಹಕ್ಕುಗಳ ಸಮಿತಿ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಗುರುರಾಜ ಬಡಿಗೇರ, ಬೋರಮ್ಮ ಹಿರೇಮಠ, ಮಹಾದೇವಿ ಕೆಂಭಾವಿ, ಬೋರಮ್ಮ ಹೂಗಾರ, ಅಯ್ಯಮ್ಮ ಹೈಯ್ಯಳ, ಶಿವಮ್ಮ ಬಾವೂರ, ಪ್ರೇಮಾ ಬಿರಾದಾರ, ಕಸ್ತೂರಿ ಬಿರಾದಾರ, ಸಾವಿತ್ರಿ ಹಿರೇಮಠ, ಶರಣಮ್ಮ ಬಾವೂರ, ದೇವಕ್ಕೆವ್ವ ನಾಯ್ಕೋಡಿ, ನಾಗವ್ವ ಚಲವಾದಿ, ಹಣಮವ್ವ ಚಲವಾದಿ, ಚಂದ್ರವ್ವ ಚಲವಾದಿ, ಕಾಶಿಬಾಯಿ ಚಲವಾದಿ, ಸಿದ್ದಮ್ಮ ಚಲವಾದಿ, ಮಡಿವಾಳಮ್ಮ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net