ಮಾದಕ ವಸ್ತು ದುಷ್ಪರಿಣಾಮದ ಜಾಗೃತಿ ಅಗತ್ಯ

7blrp4
Published on

ಬೇಲೂರು: ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳ ದಾಸರಾಗುವ ಮೂಲಕ ತಮ್ಮ ಅಮೂಲ್ಯವಾದ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದು, ಅದರ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದು ತಹಸೀಲ್ದಾರ್ ಎಂ.ಮಮತಾ ಅಭಿಪ್ರಾಯಪಟ್ಟರು.

ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಶನಿವಾರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ನಿವೃತ್ತ ನೌಕರರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷಣಿಕ ಸುಖಕ್ಕಾಗಿ ಯುವಕರು ಎಂದಿಗೂ ಮಾದಕ ವಸ್ತುಗಳತ್ತ ಗಮನ ಹರಿಸಬಾರದು. ಇದು ಮುಂದೆ ನಿಮ್ಮ ಆರೋಗ್ಯ ಹಾಗೂ ಜೀವನವನ್ನೇ ಕಸಿದುಕೊಳ್ಳುತ್ತದೆ. ದೇಶವನ್ನು ಕಟ್ಟಲು ಮತ್ತು ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಮಹತ್ತರದ್ದಾಗಿದೆ. ಆದ್ದರಿಂದ ಯುವ ಸಮುದಾಯ ಬದುಕಿನಲ್ಲಿ ಉತ್ತಮ ಗುರಿಯೊಂದಿಗೆ ಸಾಗಬೇಕು. ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ನಿವೃತ್ತ ನೌಕರರ ಸಂಘದಲ್ಲಿ ಹಮ್ಮಿಕೊಂಡು ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಕೆಲಸ ಪ್ರಥಮ ಚಿಕಿತ್ಸೆ, ತುರ್ತು ಪ್ರತಿಕ್ರಿಯೆ, ಆರೋಗ್ಯ ಮತ್ತು ಸಾಮಾಜಿಕ ಆರೈಕೆ, ವಿಪತ್ತುಗಳಿಗೆ ತಯಾರಿ, ನಿರಾಶ್ರಿತರ ಸೇವೆ ಮತ್ತು ಕಾಣೆಯಾದ ಕುಟುಂಬಗಳನ್ನು ಹುಡುಕುವಲ್ಲಿ ಜನರಿಗೆ ಸಹಾಯ ಮಾಡುತ್ತದೆ. ಜತೆಗೆ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಆಚರಿಸುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತಿದ್ದೇವೆ. ತಂಬಾಕು ಬಳಕೆಯಿಂದ ಅನಾರೋಗ್ಯ ಖಚಿತ, ಆದ್ದರಿಂದ ಸಾಧ್ಯವಾದಷ್ಟು ತಂಬಾಕು ಸೇವನೆಯಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಸಾಹಿತಿ ಇಂದಿರಮ್ಮ, ನಿವೃತ್ತ ನೌಕರರ ಸಂಘದ ಬಸವರಾಜು, ಪದ್ಮೇಗೌಡ, ವೆಂಕಟೇಶ, ಶೇಷಪ್ಪ, ಭಾರತೀಯ ರೆಡ್‌ಕ್ರಾಸ್ ಕಾರ್ಯದರ್ಶಿ ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net