ಮಾತೆ ಮರಿಯಮ್ಮ ಜಯಂತಿ ಆಚರಣೆ

8 vpt. 1
Published on

ವಿರಾಜಪೇಟೆ: ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಚರ್ಚ್‌ನಲ್ಲಿ ಯೇಸುವಿನ ತಾಯಿ ಮೇರಿ ಮಾತೆಯ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಸೋಮವಾರ ನೆರವೇರಿಸಲಾಯಿತು.

ಮೇರಿ ಹಬ್ಬದ ಹಿಂದಿನ 9 ದಿವಸಗಳ ಕಾಲ ಚರ್ಚ್‌ನಲ್ಲಿ ಪ್ರಾರ್ಥನೆ ಜರುಗಿತು. ಈ ಸಂದರ್ಭದಲ್ಲಿ ವಿಶೇಷವಾದ ಬಲಿ ಪೂಜೆ, ಪ್ರಸಂಗ, ಪ್ರಬೋಧನೆಗಳು ಜರುಗಿದವು. ಮಾತೆ ಮರಿಯಮ್ಮ ಅವರ ಗೌರವಾರ್ಥವಾಗಿ ಚರ್ಚ್ ಒಳ ಆವರಣದಲ್ಲಿರುವ ಮಾತೆ ಮರಿಯಮ್ಮ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಧರ್ಮ ಗುರುಗಳು ಹಾಗೂ ನೆರೆದಿದ್ದ ಭಕ್ತರು ಸಲ್ಲಿಸಿದರು.

ಈ ಒಂಬತ್ತು ದಿನಗಳ ವಿಶೇಷ ಪ್ರಾರ್ಥನೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂತ ಅನ್ನಮ್ಮ ದೇವಾಲಯ ವ್ಯಾಪ್ತಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಜೇಮ್ಸ್ ಡೊಮಿನಿಕ್ ಹಾಗೂ ಸಹಾಯಕ ಗುರುಗಳಾದ ರೆ. ಫಾ. ಅಭಿಲಾಶ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ಧರ್ಮ ಗುರುಗಳು ಹಬ್ಬದ ಪ್ರಯುಕ್ತ ವಿಶೇಷವಾಗಿ ಆಡಂಬರದ ಗಾಯನ ಬಲಿಪೂಜೆಯನ್ನು ನೆರವೇರಿಸಿದರು.

ನೆರೆದಿದ್ದ ಭಕ್ತರು ಮಾತೆ ಮರಿಯಮ್ಮ ಅವರ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಸಲ್ಲಿಸಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ನಂತರ ಸಹ ಭೋಜನದಲ್ಲಿ ಪಾಲ್ಗೊಂಡರು. ಹಬ್ಬದ ಪ್ರಯುಕ್ತ ನಡೆದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ವಿರಾಜಪೇಟೆ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕನ್ಯಾ ಸ್ತ್ರೀಯರು, ದೇವಸ್ಥಾನದ ಪಾಲನಾ ಸಮಿತಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net