ಮಾತೃಭಾಷೆ ಮರೆತರೆ ಹೆತ್ತವರನ್ನು ಮರೆತಂತೆ

mysore
Published on

ಮೈಸೂರು: ಮಕ್ಕಳಿಗೆ ಕನ್ನಡ ಭಾಷೆಯನ್ನು ಪ್ರಾಥಮಿಕ ಹಂತದಲ್ಲೇ ಕಲಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದು ವಿದ್ವಾಂಸ ಡಾ.ಮೈಸೂರು ಕೃಷ್ಣಮೂರ್ತಿ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ವಿಜಯ ವಿಠಲ ಕಾಲೇಜಿನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಹಬ್ಬ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆ ಇದೆ. ಈ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ಇಂದಿನ ಯುವ ಜನರು ಮಾಡಬೇಕಿದೆ ಎಂದರು.

ಕನ್ನಡದ ಅಭಿಮಾನವನ್ನು ಕನ್ನಡಿಗರು ಮಾತ್ರವಲ್ಲದೆ ಕನ್ನಡೇತರರೂ ಕೂಡ ತೋರಬೇಕು. ಇಲ್ಲದಿದ್ದರೆ ಕನ್ನಡ ಭಾಷೆ ನಿಂತ ನೀರಾಗಿ ಉಳಿಯುತ್ತದೆ. ಮಾತೃಭಾಷೆ ಮರೆತರೆ ನಾವು ನಮ್ಮ ಹೆತ್ತವರನ್ನು ಮರೆತಂತೆ. ಆದ್ದರಿಂದ ಕನ್ನಡ ಭಾಷೆಗೆ ಯಾರೇ ಆಗಲಿ ದ್ರೋಹ ಬಗೆದರೆ ಸಹಿಸಲಾಗದು ಎಂದರು

ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ನಿತ್ಯವೂ ನಾವು ಕನ್ನಡ ಭಾಷೆ ಬಳಸಬೇಕು. ಹಾಗಾದಾಗ ಮಾತ್ರ ಅದು ತನ್ನ ಅಸ್ತಿತ್ವವನ್ನು ಎಂದಿಗೂ ಬಿಡುವುದಿಲ್ಲ. ನಿತ್ಯ ನೂತನವಾಗಿ ಉಳಿಯುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದೆ.

ಆದ್ದರಿಂದ ಭಾರತಕ್ಕೆ ವಿಶ್ವ ಗುರುವಿನ ಸ್ಥಾನವನ್ನು ತಂದು ಕೊಡುವುದರಲ್ಲಿ ಕನ್ನಡದ ಕೊಡುಗೆ ಅಪಾರವಾದುದು. ಇದಕ್ಕೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಕೇಂದ್ರ ಸಾಹಿತ್ಯ ಮತ್ತು ರಾಜ್ಯ ಸಾಹಿತ್ಯ ಪ್ರಶಸ್ತಿಗಳು ಬಂದಿರುವುದೇ ಸಾಕ್ಷಿ ಎಂದರು.

ಪ್ರಾಂಶುಪಾಲೆ ಪುಟ್ಟಗೌರಮ್ಮ ಮಾತನಾಡಿ, ಅಂಕಗಳ ದೃಷ್ಟಿಯಿಂದ ಇಂದಿನ ಯುವಕರು ಇತರ ಭಾಷೆಗಳನ್ನು ಕಲಿಯುತ್ತಿರುವುದು ಬೇಸರದ ಸಂಗತಿ. ಕನ್ನಡ ಭಾಷೆಯನ್ನು ಮೊದಲು ಕಲಿತು ನಂತರ ಇತರ ಭಾಷೆಗಳನ್ನು ಕಲಿತಾಗ ಮಾತೃಭಾಷಾ ವ್ಯಾಮೋಹ ಹೆಚ್ಚುತ್ತದೆ ಎಂದು ತಿಳಿಸಿದರು.

ಕವಿ ಹಾಗೂ ಪ್ರಾಂಶುಪಾಲ ಡಾ.ಸಂತೋಷ್ ಚೊಕ್ಕಾಡಿ ಮಾತನಾಡಿ, ಕನ್ನಡ ವೇದಿಕೆಯ ಕಾರ್ಯಕ್ರಮಗಳು ಸೃಜನಶೀಲತೆಯಿಂದ ಕೂಡಿದಾಗ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಾಗಾರಗಳು ಹೊಸ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಲು ಮಾರ್ಗವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಗಮನ ವಾಚನ ಮತ್ತು ವ್ಯಾಖ್ಯಾನವನ್ನು ವಿದುಷಿ ಧರಿತ್ರಿ ಆನಂದರಾವ್ ಹಾಗೂ ವ್ಯಾಖ್ಯಾನವನ್ನು ವಿದ್ವಾನ್ ಕೃಪಾ ಮಂಜುನಾಥ್ ನಡೆಸಿಕೊಟ್ಟರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕನ್ನಡ ರಸಪ್ರಶ್ನೆ, ಗೀತಗಾಯನ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ.ಮಹೇಶ್, ಪ್ರಧಾನ ಕಾರ್ಯದರ್ಶಿ ಕೆಂಪಯ್ಯ, ಖಜಾಂಚಿ ಡಾ.ಬೇವಿನಹಳ್ಳಿ ಉಮೇಶ್, ಗೌರವಾಧ್ಯಕ್ಷ ಪುಟ್ಟಗೌರಮ್ಮ, ಪದಾಧಿಕಾರಿಗಳಾದ ಬಾಲಸುಬ್ರಹ್ಮಣ್ಯಂ, ವಿಶಕಂಠಮೂರ್ತಿ, ನೀ.ಗು.ರಮೇಶ್ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net