ಮಾತೃ ಭಾಷೆಯಲ್ಲಿ ಶಿಕ್ಷಣ ಸಿಗಬೇಕು

bkt-10-1 a
ಬಾಗಲಕೋಟೆ ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲಾ, ಬಾಗಲಕೋಟೆ ತಾಲೂಕಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಚರಂತಿಮಠದ ಪ್ರಭು ಸ್ವಾಮೀಜಿ, ಸಮ್ಮೇಳದ ಸರ್ವಾಧ್ಯಕ್ಷ ಎ.ಎಸ್.ಪಾವಟೆ, ಪತ್ರಕರ್ತೆ ರಶ್ಮಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಧಾರವಾಡ ಆಕಾಶವಾಣಿ ನಿರ್ದೇಶಕರಾದ ಡಾ.ಬಸು ಬೇವಿನಗಿಡದ, ತಾ.ಪಂ ಇಒ ಶಿವಾನಂದ ಕಲ್ಲಾಪುರ ಇತರರು ಇದ್ದರು.
Published on

ಬಾಗಲಕೋಟೆ: ಆಯಾ ಪ್ರಾದೇಶಿಕ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಇಂಗ್ಲೀಷ ಭಾಷೆ ಸರ್ವಸ್ವ ಎನ್ನುವ ಭಾವನೆ ನಮ್ಮಲ್ಲಿ ತೊಲಗಬೇಕು. ಕನ್ನಡ ಭಾಷೆಗೆ ಭವ್ಯ ಇತಿಹಾಸ, ಪರಂಪರೆ ಇದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲಾ, ಬಾಗಲಕೋಟೆ ತಾಲೂಕಾ ಘಟಕ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಗಲಕೋಟೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣವು ಕೂಡಾ ಪ್ರಾದೇಶಿಕ ಭಾಷೆಯಲ್ಲಿ ಸಿಗುವಂತಾಗಬೇಕು ಎನ್ನುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯವಾಗಿದೆ. ಬಾಗಲಕೋಟೆಯ ತೋಟಗಾರಿಕಾ ವಿಶ್ವ ವಿದ್ಯಾಲಯದಲ್ಲಿ ಕನ್ನಡದಲ್ಲಿ ತೋಟಗಾರಿಕಾ ಇಂಜಿನಿಯರಿಂಗ್ ಶಿಕ್ಷಣ ಕಲಿಸುವ ನಿರ್ಧಾರ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಕನ್ನಡ ಭಾಷೆಗೆ ಬೇರೆಯವರಿಂದ ಧಕ್ಕೆ ಬಂದಿಲ್ಲ. ಇಂಗ್ಲಿಷ್ ಭಾಷೆ ಸರ್ವಸ್ವ. ಅದು ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಇದನ್ನು ಹೋಗಲಾಡಿಸಬೇಕು. ವಿಶ್ವ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡುತ್ತಾರೆ. ಸಂಸತ್ತಿನ ಅಽವೇಶನದಲ್ಲಿ ಕನ್ನಡದಲ್ಲಿ ನಮ್ಮ ಸಂಸದರು ಮಾತನಾಡುತ್ತಾರೆ. ಲಾರ್ಡ ಮೆಕಾಲೆ ದೇಶದಲ್ಲಿ ಆಳ್ವಿಕೆ ನಡೆಸುವತ್ತಿರುವ ಸಂದರ್ಭದಲ್ಲಿ ಇಂಗ್ಲಿಷ ಮಾತ್ರ ಬಹುದೊಡ್ಡ ಭಾಷೆ ಅಂತ ಹೇಳಿ ಗುಲಮಗಿರಿಗೆ ತಳ್ಳಿ ಭಾರತವನ್ನು ಛಿದ್ರಗೊಳಿಸುವ ಹುನ್ನಾರ ಅಡಗಿತ್ತು ಎಂದು ಹೇಳಿದರು.
ಪ್ರಾದೇಶಿಕ ಭಾಷೆಯಲ್ಲಿ ನಮ್ಮ ಧರ್ಮ, ಸಂಸ್ಕೃತಿ ಅಡಗಿದೆ. ಇಂಗ್ಲಿಷನಲ್ಲಿ ಅವೆಲ್ಲ ಇಲ್ಲ. ಮಳೆ ಬಂದರೇ ಹುಯೋ ಹುಯೋ ಮಳೆರಾಯ ಅಂತ ಸಂಭ್ರಮದಿಂದ ಹಾಡುತ್ತೇವೆ. ಇಂಗ್ಲಿಷನಲ್ಲಿ ರೇನ್ ರೇನ್ ಗೋವೆ ಅಂತ ಮಕ್ಕಳಿಂದ ಹೇಳಿಸಿ ಮಳೆಯಿಂದ ತೊಂದರೆಯಾಗುತ್ತೆ ಅಂತ ಶೋಕಿಸುತ್ತೇವೆ. ಇದು ನಮ್ಮ ತಾಯಿ ನಾಡು ಹಾಗೂ ಪರಕಿಯರ ಭಾಷೆಗೂ ಇರುವ ವ್ಯತ್ಯಾಸ. ಜನಪದ, ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಅಸ್ಮಿತೆ ಎತ್ತಿ ಹಿಡಿದಿವೆ. ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪ್ರಾದೇಶಿಕ ಭಾಷೆಯಲ್ಲಿ ಕಲಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರಿದೆ ಎಂದು ತಿಳಿಸಿದರು.

ಚರಂತಿಮಠದ ಪ್ರಭು ಸ್ವಾಮೀಜಿ, ಪತ್ರಕರ್ತೆ ರಶ್ಮಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಬಾಗಲಕೋಟೆ ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಧಾರವಾಡ ಆಕಾಶವಾಣಿ ನಿರ್ದೇಶಕರಾದ ಡಾ.ಬಸು ಬೇವಿನಗಿಡದ, ತಾ.ಪಂ ಇಒ ಶಿವಾನಂದ ಕಲ್ಲಾಪುರ, ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಹಿರಿಯ ಸಾಹಿತಿ ಗುರುಸ್ವಾಮಿ ಗಣಾಚಾರಿ, ಜಿ.ಎನ್.ಪಾಟೀಲ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಎಸ್. ಹಳ್ಳೂರ ಸೇರಿದಂತೆ ಕವಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಇದ್ದರು.

ಸಾಹಿತ್ಯ-ಸಂಸ್ಕೃತಿಯ ತೊಟ್ಟಿಲು
ಸಮ್ಮೇಳದ ಸರ್ವಾಧ್ಯಕ್ಷ ಎ.ಎಸ್.ಪಾವಟೆ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ತೊಟ್ಟಿಲು ಬಾಗಲಕೋಟೆ ಜಿಲ್ಲೆ. ಅನೇಕ ರಾಜಮನೆತನಗಳು ಇಲ್ಲಿ ಆಳ್ವಿಕೆ ನಡೆಸಿವೆ. ಇಲ್ಲಿನ ಜನಪದ ಕಲೆ, ಸಂಗೀತ ಜನರ ಬದುಕಿಗೆ ನೆಮ್ಮದಿ ನೀಡಿವೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಇಲ್ಲಿನ ಜನರ ತ್ಯಾಗ ಅವಿಸ್ಮರಣೀಯ. ಅನೇಕ ಸವಾಲು, ಸಂಕಷ್ಟ ಎದುರಿ ಅಭಿವೃದ್ಧಿ ಕಾಣುತ್ತಿದೆ ಬಾಗಲಕೋಟೆ. ಶಾಸಕ ವೀರಣ್ಣ ಚರಂತಿಮಠ ಶ್ರಮದಿಂದ ಎರಡನೇ ಹಂತ ಮುಳಗಡೆ ಪೂರ್ಣಗೊಳ್ಳುತ್ತಿದೆ ಎಂದರು.
ಮಾತೃಭಾಷೆ ಶಿಕ್ಷಣದ ಮಾಧ್ಯಮವಾಗುವುದು ಇಂದು ಅತ್ಯಂತ ಅನಿವಾರ್ಯ. ಅತ್ಯವಶ್ಯವಾಗಬೇಕಾಗಿದೆ . ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ಕನ್ನಡ ಭಾಷೆ ಉಳಿಯುವದು ಅವಶ್ಯ. ಕನ್ನಡ ರಾಜ್ಯೋತ್ಸವ ಎಂದು ಬಾವುಟ ಹಿಡಿದು ಉತ್ಸಾಹದಿಂದ ಕುಣಿದರೆ ಸಾಲದು, ತಳ ಹಂತದಲ್ಲಿ ಕಾರ್ಯೊನ್ಮುಖರಾಗಬೇಕು. ಪ್ರತಿಯೊಬ್ಬ ಕನ್ನಡನಾಡಿನ ಪ್ರಜೆಯೂ ಕನ್ನಡವನ್ನೇ ತನ್ನ ದಿನನಿತ್ಯದ ಜೀವನದಲ್ಲಿ ಬಳಕೆ ಮಾಡುವದು ಕಡ್ಡಾಯವಾಗಬೇಕು . ಕನ್ನಡದಲ್ಲಿಯೇ ಮೊಬೈಲ್ ಸಂದೇಶಗಳನ್ನು ಕಳುಹಿಸುವ ರೂಢಿಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net