ಮಾತೃ ಭಾಷೆ ಹೃದಯಕ್ಕೆ ಹತ್ತಿರವಾದ ಭಾಷೆ: ಗುರುರಾಜ್ ಜಿ.ಎಸ್.

ಮಾತೃ ಭಾಷೆ ಹೃದಯಕ್ಕೆ ಹತ್ತಿರವಾದ ಭಾಷೆ: ಗುರುರಾಜ್ ಜಿ.ಎಸ್.
Published on

ಹಾಸನ: ಮಾತೃ ಭಾಷೆ ಹೃದಯಕ್ಕೆ ಹತ್ತಿರವಾದ ಭಾಷೆ ಎಂದು ಚನ್ನರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಗುರುರಾಜ್ ಜಿ.ಎಸ್. ಅಭಿಪ್ರಾಯಟ್ಟರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾತೃ ಭಾಷಾ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಬಹುಭಾಷಾ ಶಿಕ್ಷಣದಿಂದ ಶಿಕ್ಷಣವನ್ನು ಪರಿವರ್ತಿಸುವ ಅಗತ್ಯ ಹೆಚ್ಚಿದೆ .ವಿಶ್ವದಲ್ಲಿ 7ಸಾವಿರ ಭಾಷೆಗಳಿವೆ. ಶೇ. 43 ರಷ್ಟು ಭಾಷೆಗಳು ಅಪಾಯದ ಅಂಚಿನಲ್ಲಿವೆ. ಪ್ರತಿ ಎರಡು ವಾರಗಳಿಗೆ ಒಂದು ಭಾಷೆ ನಶಿಸುತ್ತಿದೆ. 1950 ರಿಂದ ಇತ್ತೀಚೆಗೆ 540 ಭಾಷೆಗಳು ನಶಿಸಿವೆ. 1075 ಭಾಷೆ ನಶಿಸುವ ಹಂತದಲ್ಲಿವೆ. ನಮ್ಮ ದೇಶದಲ್ಲಿ 3ಸಾವಿರ ಕ್ಕೂ ಅಧಿಕ ಭಾಷೆಗಳಿವೆ. ಅದರಲ್ಲೂ 270 ಮಾತೃ ಭಾಷೆಗಳಾಗಿವೆ. 121 ಅಧಿಕೃತ ಬಳಕೆಯಲ್ಲಿವೆ. 22 ಸಂವಿಧಾನ ಬದ್ಧವಾಗಿರುವ ಭಾಷೆಗಳಾಗಿವೆ. ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಸಾಂಸ್ಕೃತಿಕ ಶ್ರೀಮಂತ ದೇಶ ಎಂದರು.

ಹಿಂದಿಯನ್ನು ಶೇ. 44 ರಷ್ಟು ಜನ ಬಳಸುತ್ತಾರೆ. ಸರ್ಕಾರದ ಕೆಲವೊಂದು ನೀತಿಗಳು ಒಂದು ಭಾಷೆ ಒಂದು ದೇಶ ಇಂತಹ ನಿರ್ಣಯಗಳು ದೇಶದ ಸಮಗ್ರತೆಗೆ ಧಕ್ಕೆಯಾಗುತ್ತದೆ. ನಾವು ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಾತೃ ಭಾಷೆಯ ಸಾಹಿತ್ಯವನ್ನು ರಕ್ಷಿಸುವುದು. ಮಾತೃ ಭಾಷೆ ಹೃದಯಕ್ಕೆ ತುಂಬಾ ಹತ್ತಿರವಾದ ಭಾಷೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ದೇವರಾಜ್ ಎಚ್.ಡಿ. ಮಾತನಾಡಿ, ಯಾವುದೇ ಭಾಷೆಯಿರಲಿ ಬಳಸದೇ ಇದ್ದಾಗ ಅದು ಅಳಿವಿನ ಅಂಚಿಗೆ ಹೋಗುತ್ತದೆ. ಮಾತೃಭಾಷೆಗೆ ಅದರದೇ ಆದ ಮಹತ್ವವಿದೆ ಎಂದರು.

ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಎಲ್ಲರಿಗೂ ಅರ್ಥವಾಗುವ ಏಕೈಕ ಭಾಷೆ ಕನ್ನಡ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಭಾಷೆ. ತಾಯಿ ಎಷ್ಟು ಮುಖ್ಯವೋ ಹಾಗೆಯೇ ತಾಯಿ ಭಾಷೆ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಭಾಷೆಯನ್ನು ಮಾತನಾಡುತ್ತಾರೆ. ಮಾತೃ ಭಾಷೆಯನ್ನು ಪ್ರೀತಿಸಬೇಕು, ಪೂಜಿಸಬೇಕು ಮತ್ತು ಬೆಳೆಸಬೇಕು.

ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ಮಾತನಾಡಿ, ಮಾತೃಭಾಷೆ ಹೃದಯಕ್ಕೆ ಹತ್ತಿರವಾದ ಭಾಷೆ, ಜ್ಞಾನಕ್ಕೆ ಹತ್ತಿರವಾದ ಭಾಷೆಯಾಗಿದೆ. ಹಾಸನದವರಿಗೆ ಬೇರೆ ಭಾಷೆಯ ಪ್ರಭಾವವಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ಅವರ ಮಾತೃ ಭಾಷೆಯನ್ನು ಬಳಕೆ ಮಾಡುತ್ತಾರೆ. ಬದುಕು ಕಟ್ಟಿಕೊಳಳಲು ಮಾತ್ರ ಬೇರೆ ಭಾಷೆಗಳು ಅನಿವಾರ್ಯವಾಗುತ್ತವೆ. ವ್ಯವಹಾರಕ್ಕೆ ವಿವಿಧ ಭಾಷೆಗಳ ಬಳಕೆ ಬೇಕು. ಆದರೆ ಭಾವನಾತ್ಮಕವಾಗಿ ಸ್ಪಂದಿಸಲು ಮಾತೃ ಭಾಷೆ ಅಗತ್ಯವಾಗಿದೆ ಎಂದು ಮೆಚ್ಚುಗೆ ಮಾತುಗಳನ್ನಾಡಿದರು.

ಕನ್ನಡ ವಿಭಾಗದ ಪ್ರಾಧ್ಯಾಪಕಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಅನಿತಾ ಸ್ವಾಗತಿಸಿದರು, ಅಂತಿಮ ವರ್ಷದ ವಿದ್ಯಾರ್ಥಿ ಕೇಶವಮೂರ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ.ಸತ್ಯಮೂರ್ತಿ, ಕಾರ್ಯಕ್ರಮ ಸಂಯೋಜಕ ಅನುರಾಧ, ಕನ್ನಡ ವಿಭಾಗದ ಅಧ್ಯಾಪಕ ಡಾ.ಕೆ.ಎಸ್. ದಿನೇಶ್, ಶ್ರೀನಿವಾಸ್,ಉಪನ್ಯಾಸಕ ಚೇತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net