ಮಾತು ಕಾಲದ ದೊಡ್ಡ ಅಪಾಯ:ಪವನ್ ಕುಮಾರ ಗುಂಡೂರು ಕಳವಳ

KRT
Published on

ಕಾರಟಗಿ (ಕೊಪ್ಪಳ):ಮಾತುಗಾರನಿಗೆ ಚರಿತ್ರೆಯಲ್ಲಿ ಜಾಗವಿಲ್ಲ. ಬರೆಹಗಾರನಿಗೆ ಮಾತ್ರ ಸ್ಥಾನವಿದೆ. ಹಾಗಾಗಿ ಮಾತು ಈ ಕಾಲದ ದೊಡ್ಡ ಅಪಾಯ ಎಂದು ಲೇಖಕ ಪವನ್ ಕುಮಾರ್ ಗುಂಡೂರು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸ್ಪಂದನ ಓದು ಹೊತ್ತಿಗೆ ಬಳಗ ಶನಿವಾರ ಏರ್ಪಡಿಸಿದ್ದ ಲೇಖಕ ಚನ್ನಬಸವ ಆಸ್ಪರಿ ಅವರ 'ಸಂತೆಯೋಳಗಣ ಮೌನ' ಪುಸ್ತಕಾವಲೋಕನ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕವಿತೆ ಮಾತನಾಡಬೇಕೇ ಹೊರತು ಮಾತು ಕವಿತೆಯಾಗಬಾರದು. ಅತಿಯಾದ ಮಾತು ಆತ್ಮವಂಚನೆಯೇ ಸರಿ. ಸಹೃದಯ, ಧ್ಯಾನಸ್ಥ ಸ್ಥಿತಿಯಲ್ಲಿರುವ ಕವಿ ಮಾತ್ರ ಅತ್ಯುತ್ತಮವಾದ ಕವಿತೆಗಳನ್ನು ರಚಿಸಲು ಸಾಧ್ಯ. ಈ ಕವನ ಸಂಕಲನದಲ್ಲಿ ಧ್ಯಾನ ಮತ್ತು ಮೌನಗಳ ಆಚೆ ಗುಪ್ತಗಾಮಿನಿಯಾಗಿ ಆಧ್ಯಾತ್ಮವನ್ನು ಸಹ ಹೇಳಲಾಗಿದೆ. ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ ಬಂದ ಅತ್ಯಂತ ಮಹತ್ವದ ಕಾವ್ಯ ಸಂಕಲನ ಇದು. ಇಲ್ಲಿಯವರೆಗೆ ಹೇಳದೇ ಬಿಟ್ಟು ಹೋಗಿರುವುದನ್ನು ಇಲ್ಲಿ ಹೇಳಲಾಗಿದೆ ಎಂದರು.

ಕವಿ ಚನ್ನಬಸವ ಆಸ್ಪರಿಯವರೊಂದಿಗೆ ಅನೇಕರು ಸಂವಾದ ನಡೆಸಿದರು. ನಾನು ಸದಾ ಧ್ಯಾನ ಮಾಡುವ ಜತೆಗೆ ಧ್ಯಾನಸ್ಥ ಸ್ಥಿತಿಯಲ್ಲಿ ಇರುತ್ತೇನೆ. ನನ್ನ ಕಾವ್ಯಗಳ ಮೇಲೆ ರೂಮಿ ಪ್ರಭಾವ ತುಂಬಾ ಇದೆ. ಕಾಲದ ಘಟನೆಗಳಿಗೆ ಮುಲಾಮು ನೀಡಲಾಗಿಲ್ಲ. ಆದರೆ, ಮಿಡಿದಿದ್ದೇನೆ. ಸಮುಷ್ಠಿಯಲ್ಲಿ ಕಾವ್ಯ ರಚನೆಗೆ ಪ್ರಯತ್ನಿಸಿದ್ದೇನೆ ಎಂದು ಕವಿ ಚನ್ನಬಸವ ಆಸ್ಪರಿ ಸಂವಾದದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ಹೀಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net