

ಚಾಮರಾಜನಗರ: ತನ್ನ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯಿಂದ ಹೈದರಾಲಿಯ ಸೈನ್ಯವನ್ನು ಪುಡಿಗಟ್ಟಿ ವೀರಮರಣ ಹೊಂದಿದ ಒನಕೆ ಓಬವ್ವ ಜಯಂತಿಯಲ್ಲಿ ಮುಖಂಡರು ಸೂಕ್ತ ರೀತಿಯಲ್ಲಿ ಅನುದಾನ ಬಳಸುವಂತೆ ಅಸಮಾಧಾನದ ಒನಕೆ ಕುಟ್ಟಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಸಿ.ಎಂ.ನರಸಿಂಹಮೂರ್ತಿ, ಕೆ.ಎಂ.ನಾಗರಾಜು ಹಾಗೂ ಚಾ.ರಂ.ಶ್ರೀನಿವಾಸ್‌ಗೌಡ ಅವರು ಮಾತನಾಡಿ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಇನ್ನಿತರೆ ಜಿಲ್ಲಾಡಳಿತದ ವತಿಯಿಂದ ಬಹಳ ಅದ್ಧೂರಿಯಾಗಿ ಓಬವ್ವ ಜಯಣತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾರ್ಯಕ್ರಮ ಆಚರಣೆಗೆ 50 ಸಾವಿರ ರೂ, ಅನುದಾನವನ್ನು ನೀಡಲಾಗುತ್ತಿದೆ. ಅದನ್ನು ಯಾಕೇ ವಾಪಸ್ ಕಳುಹಿಸಿಬೇಕು. ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಹಲವಾರು ಮುಖಂಡರುಗಳಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೂಕ್ತ ರೀತಿಯ ಮಾಹಿತಿ ನೀಡುವುದಿಲ್ಲ. ಎಲ್ಲಾ ಸಮುದಾಯದವರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಬೇಕು. ಆದರೇ ಅಧಿಕಾರಿಗಳು ಕೆಲವು ಮಹಾಪುರುಷರನ್ನು ಸಮುದಾಯಕ್ಕೆ ಸೀಮಿತಗೊಳಿಸುತ್ತಾರೆ. ಜಿಲ್ಲಾಡಳಿತ ವತಿಯಿಂದ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡಪರ ಹೋರಾಟಗಾರರನ್ನು ಪರಿಗಣಿಸಿಲ್ಲ. ಇಂತಹ ಕಾರ್ಯಕ್ರಮಗಳಿಗೆ ನಮ್ಮನ್ನು ಯಾಕೇ ಕರೆಯಬೇಕು ಎಂದು ಪ್ರಶ್ನಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಗೀತಾಹುಡೇದ ಪ್ರತಿಕ್ರಿಯಿಸಿ, ಓಬವ್ವ ಜಯಂತಿ ಆಚರಣೆ ಸಂಬಂಧ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಪತ್ರಿಕಾ ಪ್ರಟಣೆಯನ್ನು ನೀಡಲಾಗಿತ್ತು. ವೈಯಕ್ತಿಕವಾಗಿ ಯಾರನ್ನು ಆಹ್ವಾನಿಸಲು ಸಾಧ್ಯವಿಲ್ಲ. ಎಲ್ಲಾ ಮಹಾಪುರುಷರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಓಬವ್ವ ಜಯಂತಿಯನ್ನು ದೊಡ್ಡಮಟ್ಟದಲ್ಲಿ ಆಚರಣೆ ಮಾಡಲಾಗುವುದು. ಈಗ ಜಯಂತಿ ಕಾರ್ಯಕ್ರಮಕ್ಕೆ ಸಹಕರಿಸಿ ಎಂದು ಕೇಳಿದ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಕನ್ನಡ ಮತ್ತು ಇಲಾಖೆ ಸಹಾಯಕ ನಿರ್ದೇಶಕ ಉದಯ್ ಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿಂದ್ಯಾ ಹಾಗೂ ಇತರರು ಉಪಸ್ಥಿತರಿದ್ದರು.