

ಭಾಲ್ಕಿ: ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿ, ತಪೋರತ್ನ ಪೂಜ್ಯ ಮಾತೆ ಕರುಣಾದೇವಿ ಅವರ 60ನೇ ಜನ್ಮದಿನ ನಿಮಿತ್ತ ಮಾತೆ ಅವರ ಜನ್ಮಭೂಮಿಯಾದ ಧನ್ನೂರ(ಎಚ್) ಗ್ರಾಮದಲ್ಲಿ ವೀರಶೈವ ರಕ್ಷಣಾ ವೇದಿಕೆ ಮತ್ತು ಶಾಂಭವಿ ಅಧ್ಯಾತ್ಮ ವೇದಿಕೆಯಿಂದ ಸೋಮವಾರ ಅರ್ಥಪೂರ್ಣವಾಗಿ ಗುರುವಂದನೆ ನಡೆಯಿತು.
ಬೇಮಳಖೇಡ್ ಹಿರೇಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಮಾತಾಜಿಗೆ ರುದ್ರಾಕ್ಷಿ ಕಿರೀಟ ತೊಡಿಸಿ ಗೌರವಿಸಿದರು. ನೆರೆದ ಭಕ್ತರು ಅಕ್ಕಮಹಾದೇವಿ ಚೈತನ್ಯ ಪೀಠಕ್ಕೆ ಜಯವಾಗಲಿ ಎಂದು ಜಯಘೋಷ ಹಾಕಿದರು.
ಸಮಾರಂಭ ಉದ್ಘಾಟಿಸಿ ಸಚಿವ ಖೂಬಾ ಮಾತನಾಡಿ, ತಮ್ಮ ಅಪೂರ್ವ ಸಾಧನೆಯಿಂದ ದೇಶದ ಅಧ್ಯಾತ್ಮ ಲೋಕಕ್ಕೆ ದೊಡ್ಡ ಗೌರವ ತಂದಿರುವ ಕರುಣಾದೇವಿ ಧೀಮಂತ ಮಾತೆ. 12ನೇ ಶತಮಾನದ ಅಕ್ಕಮಹಾದೇವಿ ಜಾಗತಿಕ ಮಹಿಳಾ ಆತ್ಮಬಲದ ಸಂಕೇತವಾಗಿದ್ದು, ಅವರ ಅಧ್ಯಾತ್ಮದ ಹೆದ್ದಾರಿಯಲ್ಲಿ ಮಾತಾಜಿ ನಡೆದುಕೊಂಡು ಬರುತ್ತಿದ್ದಾರೆ ಎಂದರು.
ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಮಾತನಾಡಿ, ಲೋಕದ ಕಲ್ಯಾಣಕ್ಕಾಗಿ ಮಾತಾಜಿ ಶ್ರಮಿಸುತ್ತಿದ್ದಾರೆ. ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಭಿವೃದ್ಧಿಗಾಗಿ ಅನುದಾನ ಒದಗಿಸಲು ಕೇಂದ್ರ ಸಚಿವ ಖೂಬಾ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಲಾಗುವುದು ಎಂದರು.
ಶ್ರೀಶೈಲ ಟ್ರಸ್ಟ್ ಸದಸ್ಯೆ ಶಕುಂತಲಾ ತಂಬಾಕೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕಾಶೀನಾಥ ಖಂಡ್ರೆ, ಡಾ.ಓಂಕಾರ ಸ್ವಾಮಿ, ವೀರಶೆಟ್ಟಿ ಭಂಗೂರ, ಚಂದ್ರಶೇಖರ ಪಾಟೀಲ್, ಮಹಾದೇವಪ್ಪ ಭಂಗೂರ, ಯೋಗೇಶ ಸೋಲಾಪುರ, ಪ್ರುಲ್ ಪಾಂಡೆ, ಬಾಬುರಾವ ಪೊಲೀಸ್ ಪಾಟೀಲ್, ಗುಂಡೇರಾವ ಪಾಟೀಲ್, ಅಕ್ಕಮಹಾದೇವಿ ಮಠಪತಿ, ಅನೀಲಕುಮಾರ ಪಾಟೀಲ್ ಇತರರಿದ್ದರು. ಬಸವರಾಜ ಹಾಲಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಗುರುವಂದನಾ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ ದಾನಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು.