ಮಾಣಿಕಪ್ರಭು ಜಯಂತ್ಯುತ್ಸವ ವೈಭವ

15klb HBD 3
ಬೀದರ್ ಜಿಲ್ಲೆ ಹುಮನಾಬಾದ್ ಹತ್ತಿರದ ಮಾಣಿಕನಗರದಲ್ಲಿ ಮಾಣಿಕಪ್ರಭು ದೇವಸ್ಥಾನ ಎದುರು ಹೊಸದಾಗಿ ನಿರ್ಮಿಸಿದ ದತ್ತ ಲೋಕ ಹಾಗೂ ಶ್ರೀ ದತ್ತ ಮೂರ್ತಿಗೆ ಶನಿವಾರ ರಾತ್ರಿ ವಿಶೇಷ ಪೂಜೆಯೊಂದಿಗೆ ಪೀಠಾಧಿಪತಿ ಶ್ರೀ ಡಾ.ಜ್ಞಾನರಾಜ ಪ್ರಭು ಲೋಕಾರ್ಪಣೆ ಮಾಡಿದರು.
Published on

ಹುಮನಾಬಾದ್: ಮಾಣಿಕನಗರದ ಮಾಣಿಕಪ್ರಭು ದೇವಸ್ಥಾನದಲ್ಲಿ ಭಾನುವಾರ ಶ್ರೀ ಮಾಣಿಕಪ್ರಭು ಹಾಗೂ ದತ್ತ ಜಯಂತಿ ಮಹೋತ್ಸವ ಭಕ್ತಿಭಾವದ ಮಧ್ಯೆ ಜರುಗಿತು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಅಪಾರ ಭಕ್ತಾದಿಗಳ ಮಧ್ಯೆ ಸಂಸ್ಥಾನದ ಪೀಠಾಧಿಪತಿ ಡಾ.ಜ್ಞಾನರಾಜ ಪ್ರಭುಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಶೇಷ ಪೂಜೆ ಕಾರ್ಯಗಳು ನೆರವೇರಿದವು. ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು, ಸಹ ಕಾರ್ಯದರ್ಶಿ ಚೈತನರಾಜ ಪ್ರಭುಗಳು ಶ್ರೀಗಳಿಗೆ ನೆರವಾದರು.

ದೇಗುಲ ಆವರಣದಲ್ಲಿ ಬೆಳಗ್ಗೆಯಿಂದ ಸಾಂಸ್ಕೃತಿಕ ಕಲಾ ತಂಡಗಳು ಹಾಗೂ ಮಾಣಿಕಪ್ರಭು ಸಂಸ್ಥಾನದ ಶಾಲಾ-ಕಾಲೇಜಿನ ಮಕ್ಕಳು ವೈವಿಧ್ಯಮಯ ಕಾರ್ಯಕ್ರಮ ನಡೆಸಿಕೊಟ್ಟರು. ಭಕ್ತರಿಂದ ಮೊಳಗಿದ ಮಾಣಿಕಪ್ರಭುಗಳ ಜೈಕಾರ ಮುಗಿಲು ಮುಟ್ಟುವಂತಿತ್ತು.

ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಅಸಂಖ್ಯಾತ ಭಕ್ತರು ಬೆಳಗ್ಗೆಯಿಂದ ರಾತ್ರಿವರೆಗೆ ಸರದಿಯಲ್ಲಿ ನಿಂತು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸ್ವಯಂ ಸೇವಕರು ಭಕ್ತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದರೆ, ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಸಂಗೀತ ಕಾರ್ಯಕ್ರಮದಲ್ಲಿ ಮಾಣಿಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಯರು, ರಾಯಚೂರಿನ ಅಂಧ ಮಕ್ಕಳ ಶಾಲೆ ಹಾಗೂ ಮಾಣಿಕನಗರದ ವಿದ್ಯಾರ್ಥಿಗಳು ಸಂಗೀತದ ರುಚಿಯನ್ನು ಉಣ ಬಡಿಸಿದರು. ಅಸ್ಥಾನ ಕಲಾವಿದರಾದ ಅಜಯ ಸೂಗಾಂವಕರ, ದಿನೇಶ ಕುಲಕರ್ಣಿ ಹಾರ್ಮೋನಿಯಂ ಮತ್ತು ಕೇದಾರ ದೇಶಪಾಂಡೆ ತಬಲಾ ಸಾಥ್ ನೀಡಿದರು.

ಮಾಣಿಕಪ್ರಭು ಸಂಸ್ಥಾನ ಧರ್ಮ ಸಮನ್ವಯದ ನೆಲೆಬೀಡು. ಸಕಲಮತ ತತ್ವ ಆಚರಣೆ ಶೃದ್ಧೆಯ ಕೇಂದ್ರ. ದತ್ತ ಜಯಂತಿ ಉತ್ಸವಕ್ಕೆ ದೇಶದ ನಾನಾ ಕಡೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನ ಪಡೆದು ಧನ್ಯತೆ ಮೆರೆದಿದ್ದಾರೆ. ಸೋಮವಾರ ರಾತ್ರಿಯಿಡೀ ಪ್ರಖ್ಯಾತ್ ಕಲಾವಿದರಿಂದ ಸಂಗೀತ ದರ್ಬಾರ್ ನಡೆಯುವುದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

| ಶ್ರೀ ಆನಂದರಾಜ ಪ್ರಭು ಮಾಣಿಕ ಸಂಸ್ಥಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net