ಮಾಡಾಳು ಸ್ವರ್ಣಗೌರಿ ವಿಸರ್ಜನಾ ಸಂಭ್ರಮ

08arsph4ep
ಮಾಡಾಳು ಸ್ವರ್ಣಗೌರಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಮೆರವಣಿಗೆ ನಡೆಸಲಾಯಿತು.
Published on

ಅರಸೀಕೆರೆ: ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಸ್ವರ್ಣ ಗೌರಿ ವಿಸರ್ಜನಾ ಮಹೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿಯನ್ನು ಬಗೆ ಬಗೆಯ ಹೂಗಳಿಂದ ಪಲ್ಲಕ್ಕಿ ಸಹಿತ ಮೆರವಣಿಗೆಗೆ ಸಜ್ಜುಗೊಳಿಸಲಾಯಿತು. ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ಮಡಿಲು ತುಂಬಿಸಿಕೊಳ್ಳುವ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಗೌರಮ್ಮನವರ ಸ್ವಾಗತಕ್ಕಾಗಿ ಮಹಿಳೆಯರು ಗ್ರಾಮದ ಬೀದಿ ಬೀದಿಗಳಲ್ಲಿ ಚಿತ್ತಾರದ ರಂಗೋಲಿ ಬಿಡಿಸಿದ್ದು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ಭಕ್ತ ಸಮುದಾಯ ತಳಿರು- ತೋರಣಗಳಿಂದ ಅಲಂಕರಿಸಲಾಗಿತ್ತು. ನೆರೆದಿದ್ದ ಭಕ್ತ ಸಮೂಹ ಜಯಘೋಷ ಕೂಗುತ್ತ ಕರ್ಪೂರದ ಕುಂಡದಲ್ಲಿ ಲಕ್ಷಾಂತರ ಕರ್ಪೂರದ ಬಿಲ್ಲೆಗಳನ್ನು ಸುಡುವ ಮೂಲಕ ತಾವು ತಂದಿದ್ದ ಕಾಣಿಕೆಗಳನ್ನು ಸಮರ್ಪಿಸಿ ಗೌರಮ್ಮನವರ ಹರಕೆ ತೀರಿಸಿದರು. ಇನ್ನು ಕೆಲ ಸುಮಂಗಲೆಯರು ರಾತ್ರಿಯಿಡೀ ಕರ್ಪೂರದ ಗುಗ್ಗಳ ಹೊತ್ತು ಭಕ್ತಿ ಸಮರ್ಪಿಸಿದರು.

ಗ್ರಾಮದ ಮಧ್ಯಭಾಗದಲ್ಲಿರುವ ಕಲ್ಯಾಣಿಯಲ್ಲಿ ಗೋಧೂಳಿ ವೇಳೆಗೆ ವಿಸರ್ಜನಾ ಮಹೋತ್ಸವ ಸಂಪನ್ನಗೊಂಡಿದ್ದು, ಮಹಾ ತಾಯಿಗೆ ಭಕ್ತಿಪೂರ್ವಕ ಬೀಳ್ಕೊಡುಗೆ ನೀಡಿದರು. ಉತ್ಸವ ಸಮಿತಿ ಅಧ್ಯಕ್ಷ ಎಂ.ಈ.ಚಂದ್ರಶೇಖರ್ ಸೇರಿ ಪದಾಧಿಕಾರಿಗಳು ಮಹೋತ್ಸವದ ಮುಂಚೂಣಿಯಲ್ಲಿದ್ದರು.

ಕಿತ್ತನಕೆರೆ, ದೋಣನಕಟೆ, ದಿಬ್ಬೂರು, ಹಿರಿಸಾದರಹಳ್ಳಿ, ಸೀತಾಪುರ, ಶಶಿವಾಳ, ರಾಂಪುರ, ಡಿ.ಎಂ.ಕುರ್ಕೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು, ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕೈಗಾರಿಕೋದ್ಯಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇವಿಯ ದರ್ಶನ ಪಡೆದರು. ಇದರೊಂದಿಗೆ ಕಳೆದ 10 ದಿನಗಳಿಂದ ನಡೆಯುತ್ತಿದ್ದ ಸ್ವರ್ಣಗೌರಿ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬಿದ್ದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net