ಮಾಜಿ ಸೈನಿಕರಿಗೆ ರಾಜಕೀಯ ಮೀಸಲಾತಿ ನೀಡಲು ಮಾಜಿ ಸೈನಿಕ ಚಂದ್ರಶೇಖರ್ ಒತ್ತಾಯ

ಮಾಜಿ ಸೈನಿಕರಿಗೆ ರಾಜಕೀಯ ಮೀಸಲಾತಿ ನೀಡಲು ಮಾಜಿ ಸೈನಿಕ ಚಂದ್ರಶೇಖರ್ ಒತ್ತಾಯ
Published on

ಹಾಸನ: ದೇಶದ ಗಡಿ ರಕ್ಷಣೆಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಸೈನಿಕರಿಗೆ ನಿವೃತ್ತಿ ಬಳಿಕ ಯಾವ ಸೌಲಭ್ಯವು ದೊರೆಯುವುದಿಲ್ಲ. ಶಿಸ್ತು, ಸಂಯಮ, ಪ್ರಾಮಾಣಿಕತೆ ಹಾಗು ದೇಶಭಕ್ತಿಯನ್ನು ಕರಗತ ಮಾಡಿಕೊಂಡಿರುವ ಸೈನಿಕರಿಗೆ ರಾಜಕೀಯ ಮೀಸಲಾತಿ ನೀಡುವ ಮೂಲಕ ಸರ್ಕಾರ ಯೋಧರನ್ನು ಬಳಸಿಕೊಳ್ಳಬೇಕೆಂದು ಮಾಜಿ ಸೈನಿಕ ಚಂದ್ರಶೇಖರ್ ಅವರು ಒತ್ತಾಯಿಸಿದರು.
ನಗರದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಶಸ್ತ್ರ ಪಡೆಗಳ ಪರಿಣಿತರ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಾಯುದಳ, ಭೂಸೇನೆ ಹಾಗು ನೌಕಾ ಪಡೆಗಳು ಭಾರತದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿವೆ. ನಾವು ಸೇನೆಯಲ್ಲಿ ಪಡೆದ ತರಬೇತಿಯು ಜೀವನಪಯರ್ಂತ ನೆನಪಿನಲ್ಲಿ ಉಳಿಯುತ್ತದೆ. ದೈಹಿಕವಾಗಿ ಸೈನಿಕರಷ್ಟು ಶ್ರಮಪಡುವ ಉದ್ಯೋಗ ಮತ್ತೊಂದಿಲ್ಲ. ಮರಳುಗಾಡು, ಬೆಟ್ಟ ಗುಡ್ಡ, ಕಣಿವೆ ಹಾಗು ಆಕಾಶ ಮಾರ್ಗದಲ್ಲಿಯೂ ಶ್ರಮವಹಿಸಿ ಕೆಲಸ ಮಾಡುತ್ತೇವೆ. ಅಲ್ಲಿನ ಶ್ರಮ, ತಾಳ್ಮೆ ಜೀವನಪಯರ್ಂತ ಜೊತೆಗಿರುತ್ತದೆ. ಅಲ್ಲಿ ಕಲಿತ ಪಾಠವನ್ನು ಇತರರಿಗು ಕಲಿಸಲು ಅವಕಾಶ ಬೇಕಾಗುತ್ತದೆ. ಆದ್ದರಿಂದ ರಾಜಕೀಯ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇವೆ ಎಂದರು.
ಜಿಲ್ಲಾ ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಗೋವಿಂದೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎಸ್.ಪ್ರದೀಪ್ ಸಾಗರ್ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಸಿಕ್ಕಿದೆಯಾದರೂ ಸೈನಿಕರು ಇಂದಿಗೂ ದಾಸ್ಯದಲ್ಲಿಯೇ ಬದುಕುತ್ತಿದ್ದಾರೆ. ಸೈನಿಕರಿಗೆ ರಾಜಕೀಯದಲ್ಲೂ ಮೀಸಲಾತಿ ಕೊಡಬೇಕು. ಸರ್ಕಾರಿ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಶೇ. 10 ರಷ್ಟು ಮೀಸಲಾತಿ ನೀಡಲಾಗಿದೆಯಾದರೂ ಕೆಲವು ಇಲಾಖೆಗಳು ಇದನ್ನು ಪರಿಗಣಿಸುತ್ತಿಲ್ಲ. ಮಾಜಿ ಸೈನಿಕರಿಗೆ ಸೇವೆಯ ನಂತರ ಸರ್ಕಾರಿ ಹುದ್ದೆಗಳಲ್ಲಿ ಅವಕಾಶ ದೊರೆಯುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಎಂ.ಜಿ.ಶೆಟ್ಟಿ, ದೊರೆರಾಜು, ಜಿಲ್ಲಾ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ನಟೇಶ್, ಅಧ್ಯಕ್ಷ ಎನ್.ವೆಂಕಟೇಶ್, ಖಜಾಂಚಿ ಬಾಲಕೃಷ್ಣ, ಚಂದ್ರೇಗೌಡ, ಬಸವರಾಜ್, ಮಾಜಿ ಅಧ್ಯಕ್ಷ ಪ್ರಭಾಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net